ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸದಸ್ಯ ಡಿ.ಸಿ. ಸಣ್ಣಸ್ವಾಮಿ ಅವರ ಮೇಲೆ ಮುರುಳಿ ಮೋಹನ್ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಹಾಗೂ ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಜನವರಿ ೧೬ರಂದು ಸಕಲೇಶಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನಸ್ಪಂದನಾ ಸಭೆ ಬಳಿಕ ಅಧಿಕಾರಿಗಳ ಸಭೆಗೆ ತೆರಳುತ್ತಿದ್ದ ವೇಳೆ, ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸಣ್ಣಸ್ವಾಮಿ ಅವರು ಮನವಿ ಸಲ್ಲಿಸಲು ಮುಂದಾದಾಗ, ಮುರುಳಿ ಮೋಹನ್ ಅಹಂಕಾರ ತೋರಿಸಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಕಲೇಶಪುರ ತಾಲೂಕಿನ ಕಾಂಗ್ರೆಸ್‌ ಮುಖಂಡ ಡಿ.ಸಿ.ಸಣ್ಣಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುರುಳಿ ಮೋಹನ್ ಅವರನ್ನು ತಕ್ಷಣವೇ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಕುಮಾರಶೆಟ್ಟಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸದಸ್ಯ ಡಿ.ಸಿ. ಸಣ್ಣಸ್ವಾಮಿ ಅವರ ಮೇಲೆ ಮುರುಳಿ ಮೋಹನ್ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಹಾಗೂ ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಜನವರಿ ೧೬ರಂದು ಸಕಲೇಶಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನಸ್ಪಂದನಾ ಸಭೆ ಬಳಿಕ ಅಧಿಕಾರಿಗಳ ಸಭೆಗೆ ತೆರಳುತ್ತಿದ್ದ ವೇಳೆ, ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸಣ್ಣಸ್ವಾಮಿ ಅವರು ಮನವಿ ಸಲ್ಲಿಸಲು ಮುಂದಾದಾಗ, ಮುರುಳಿ ಮೋಹನ್ ಅಹಂಕಾರ ತೋರಿಸಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು. ಸಭಾಂಗಣದ ಗೇಟಿನ ಬಳಿ ತಡೆದು ಏಕವಚನದಲ್ಲಿ ಮಾತನಾಡಿ ಹಲ್ಲೆ ನಡೆಸಿ, ಅವರ ಬಟ್ಟೆ ಹರಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಇಷ್ಟೇ ಅಲ್ಲದೆ, ಸಣ್ಣಸ್ವಾಮಿ ಅವರನ್ನು ಎಳೆದಾಡಿ, “ಇವರನ್ನು ಒಳಗೆ ಬಿಡಬೇಡಿ” ಎಂದು ಪೊಲೀಸರಿಗೆ ಸೂಚಿಸಿ ಹೊರ ಹಾಕಿಸಿರುವುದು ಪಕ್ಷದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಕುಮಾರಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಹೊರಗಿನಿಂದ ಬಂದು ಸ್ಥಳೀಯ ಹಿರಿಯ ಕಾಂಗ್ರೆಸ್ ನಾಯಕರ ಮೇಲೆ ಕೈ ಮಾಡಿದ ಮುರುಳಿ ಮೋಹನ್ ಅವರನ್ನು ಕೂಡಲೇ ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಳಿ ಮೋಹನ್ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್ ನೀಡಬಾರದು. ಒಂದುವೇಳೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂಬುದಾಗಿ ಹೇಳಿದರು. ಈ ಪ್ರಕರಣದ ಕುರಿತು ಶೀಘ್ರದಲ್ಲೇ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಪಕ್ಷದ ಉನ್ನತ ನಾಯಕರಿಗೆ ದೂರು ಸಲ್ಲಿಸಲಾಗುವುದು ಎಂದು ಕುಮಾರಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಮಲ್ಲಿಗೆವಾಳು ದ್ಯಾವಪ್ಪ, ಮುಖಂಡರಾದ ಅಶೋಕ್ ನಾಯಕರಹಳ್ಳಿ, ವೆಂಕಟೇಶ್, ಮಣಿಕಂಠಸ್ವಾಮಿ ಇತರರು ಉಪಸ್ಥಿತರಿದ್ದರು.