ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಮಾನವ ಸರಪಳಿ ನಿರ್ಮಿಸಿ, ಆಕ್ರೋಶ

| Published : Nov 23 2025, 01:15 AM IST

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಮಾನವ ಸರಪಳಿ ನಿರ್ಮಿಸಿ, ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

Demand for filling vacant posts: Form a human chain, outrage

- ಯಾದಗಿರಿಯಲ್ಲಿ ಉದ್ಯೋಗಾಕಾಂಕ್ಷಿಗಳು ಹೋರಾಟ ಸಮಿತಿ ಪ್ರತಿಭಟನೆ । ಚನ್ನಬಸವ ಜಾನೇಕಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ನಗರದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೇಕಲ್ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ, ಬೃಹತ್ ಪ್ರತಿಭಟನೆ ನಡೆಸಲಾಯಿತು.

ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ ತಡೆಗಟ್ಟಿ ನೇಮಕಾತಿಯಲ್ಲಿ ಅರ್ಹ ವಯೋಮಿತಿ ಕನಿಷ್ಠ ಐದು ವರ್ಷ ಹೆಚ್ಚಿಸಿ. ಉದ್ಯೋಗ ನಮ್ಮ ಹಕ್ಕು, ಖಾಲಿ ಹುದ್ದೆ ಭರ್ತಿ ಮಾಡಬೇಕು. ದುಬಾರಿ ಅರ್ಜಿ ಶುಲ್ಕ ಕೈಬಿಟ್ಟು ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಬೇಕೆಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಗರದ ಹೊಸ ಬಸ್ ನಿಲ್ದಾಣದಿಂದ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಬಳಿಕ, ನೇತಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜಿಪಿ ವೈಫಲ್ಯ ಎತ್ತಿ ತೋರಿಸುವ ಕಾಂಗ್ರೆಸ್, ತಾನು ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು 2 ವರ್ಷ 6 ತಿಂಗಳು ಕಳೆದರೂ ಒಳ ಮೀಸಲು ಹೆಸರಿನಲ್ಲಿ ಯಾವುದೇ ನೇಮಕಾತಿ ಮಾಡಿಲ್ಲ ಎಂದು ಚನ್ನಬಸವ ಜಾನೇಕಲ್ ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸ್ ಪೇದೆ ವಯೋಮಿತಿ ಜಿಎಂ.30, ಎಸ್‌ಸಿ., ಎಸ್‌ಟಿ, ಓಬಿಸಿ 33 ವರ್ಷಗಳಿಗೆ ಹೆಚ್ಚಿಸಿ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಗುಲ್ಬರ್ಗ ವಿಶ್ವವಿದ್ಯಾಲಯ ಬಿಇಡಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಕೂಡಲೇ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು. ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಣ ಶಿಕ್ಷಕರು ಸೇರಿ ಎಲ್ಲಾ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಇತ್ತೀಚೆಗೆ ಕೆಇಎ ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು.

ರಾಜ್ಯದಲ್ಲಿ ಎಲ್ಲಾ ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕ ಕೈಬಿಡಿ. ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯದಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ನೇಮಕಾತಿ ಪ್ರಕ್ರಿಯೆ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು. ರೈಲ್ವೇ ಬ್ಯಾಂಕ್, ಎಲ್‌ಐಸಿ ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ನೇಮಕಾತಿಯಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆ ಕಾಪಾಡಿ. ಕೇಂದ್ರ ಸರಕಾರದಿಂದ ತಡೆ ಹಿಡಿದ ಎಲ್ಲಾ ನೇಮಕಾತಿ ಪ್ರಕ್ರಿಯೆ ಈ ಕೂಡಲೇ ಪುನರ್ ಆರಂಭಿಸಿ. ಕೇಂದ್ರದ ವಿವಿಧ ನೇಮಕಾತಿಗಳ ಅರ್ಜಿ ಶುಲ್ಕ ಸಂಪೂರ್ಣ ಕೈಬಿಡಿ. ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನಕ್ಕೆ ಹಾಜರಾಗಲು ಬಸ್, ರೈಲುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದರು.

ದಿನಗೂಲಿ, ಗುತ್ತಿಗೆ ಹೊರಗುತ್ತಿಗೆ ಪದ್ಧತಿ ಕೈಬಿಟ್ಟು, ಕಾಯಂ ಆಧಾರದಲ್ಲಿ ನೇಮಿಸಿಕೊಳ್ಳಿ. ರದ್ದಾಗಿರುವ ಲಕ್ಷಾಂತರ ಹುದ್ದೆ ಪುನರ್ ಸ್ಥಾಪಿಸಬೇಕು. ಜತೆಗೆ ವಿಲೀನ, ರದ್ದು ಪ್ರಕ್ರಿಯೆ ಕೈಬಿಡಬೇಕು. ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ಕೈಬಿಡಬೇಕು ಎಂದು ಹೋರಾಟ ಬೆಂಬಲಿಸಿ, ಸಕ್ಸೆಸ್ ಗ್ರಂಥಾಲಯದ ನಿರ್ದೇಶಕ ಮಾಳಪ್ಪ ಯಾದವ, ಹೋರಾಟ ಸಮಿತಿ ಸದಸ್ಯರಾದ ಮಹೇಶ್ ಲಿಂಗೇರಿ, ಬಾಗಪ್ಪ ರಾಂಪುರ, ಪರಮ ಸುರುಪುರ, ಭೀಮಮ್ಮ ಮಾತನಾಡಿ, ಖಾಲಿ ಹುದ್ದೆಗಳ ಭರ್ತಿ ಮಾಡದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಸಂತೋಷ್ ರಾಥೋಡ್, ದೇವರಾಜ, ಕರಣ್, ಅನಿಲ್‌ಕುಮಾರ್, ರಾಜು, ರೋಹಿತ್, ಮೌನೇಶ್, ಸಂಗಮೇಶ್, ಯಲ್ಲಾಲಿಂಗ, ವಿಶ್ವನಾಥ್, ಹಣಮಂತ ಶಹಾಪುರ, ಸೋಮ್ಲಾ, ತಾಯಪ್ಪ, ಐಲಿಂಗ, ಮಲ್ಲಮ್ಮ, ಬಸಮ್ಮ, ಭೀಮಮ್ಮ ಸೇರಿ ಅನೇಕರಿದ್ದರು.

-

ಕೋಟ್‌- : 2025-26ನೇ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಹುದ್ದೆ ಖಾಲಿಗಳು ಬಿದ್ದಿವೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆ ಖಾಲಿ ಇವೆ. ಕೇಂದ್ರದಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ನೇಮಕಾತಿ ಬಿಟ್ಟು ಉದ್ಯೋಗ ರದ್ಧತಿಗೆ ಮುಂದಾಗಿರುವುದು ಖಂಡನೀಯ. : ಚೆನ್ನಬಸವ ಜಾನೇಕಲ್, ರಾಜ್ಯ ಸಹ ಸಂಚಾಲಕ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ.

-

22ವೈಡಿಆರ್14 : ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ಯಾದಗಿರಿಯ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೇಕಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಪರ ಜಿಲ್ಲಾಧಿಕಾರಿ ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

-

22ವೈಡಿಆರ್15 : ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ಯಾದಗಿರಿಯ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೇಕಲ್ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ, ಬೃಹತ್ ಪ್ರತಿಭಟನೆ ನಡೆಸಲಾಯಿತು.