ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ಆಗ್ರಹ

| Published : Dec 19 2024, 01:31 AM IST

ಸಾರಾಂಶ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ರಚನೆ ಮಾಡಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ರೀತಿಯಲ್ಲಿಯೇ ಕಿತ್ತೂರು ಕರ್ನಾಟಕದ ಅಭಿವೃದ್ಧಿಗಾಗಿ ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆ ಮಾಡಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸಭೆ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ರಚನೆ ಮಾಡಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ರೀತಿಯಲ್ಲಿಯೇ ಕಿತ್ತೂರು ಕರ್ನಾಟಕದ ಅಭಿವೃದ್ಧಿಗಾಗಿ ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆ ಮಾಡಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು.

ಬುಧವಾರ ಉತ್ತರ ಕರ್ನಾಟಕ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಸವದಿ ಮತ್ತು ಬಿಜೆಪಿ ಸದಸ್ಯ ಅಭಯ ಪಾಟೀಲ ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ಆಗ್ರಹಿಸಿದರು.

ಲಕ್ಷ್ಮಣ್‌ ಸವದಿ ಮಾತನಾಡಿ, ಕಿತ್ತೂರು ಕರ್ನಾಟಕದ ಜಿಲ್ಲೆಗಳು ಬಯಲು ಸೀಮೆ ಅಭಿವೃದ್ಧಿ ಮಂಡಳಿ ವ್ಯಾಪ್ತಿಯೊಳಗೆ ಇದ್ದು, ಅಲ್ಲಿಂದ ಹೊರ ತೆಗೆದು ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಬೇಕು. ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿ ಪ್ರಾರಂಭಿಸಬೇಕು. ಮೊದಲು ₹1 ಸಾವಿರ ಕೋಟಿ ಇಡಬೇಕು. ಮಂಡಳಿ ಉತ್ತಮ ಕೆಲಸ ಮಾಡಿದ ಬಳಿಕ ಹಂತ ಹಂತವಾಗಿ ಅನುದಾನ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದರು.ಅಭಯ ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಲಭಿಸಿದ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆ ಮಾಡಲಾಯಿತು. ಇದರಿಂದ ಪ್ರತ್ಯೇಕ ಅನುದಾನ ಲಭಿಸಿ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇದರಂತೆ ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆ ಮಾಡುವುದರಿಂದ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.ಸುವರ್ಣವಿಧಾನಸೌಧ ನಿರ್ಮಾಣವಾದ ಬಳಿಕ ಬೆಳಗಾವಿಗೆ ಅನ್ಯಾಯವಾಗಿದೆ. ಈ ಕಟ್ಟಡವನ್ನು ಬೂತ್‌ ಬಂಗಲೆ ಎಂದು ಕರೆಯಲಾಗುತ್ತಿದೆ. ಕಟ್ಟಡ ನಿರ್ಮಾಣ ಮಾಡಿ ಇಲ್ಲಿನವರಿಗೆ ಲಾಲಿಪಾಪ್‌ ನೀಡಿ ಖುಷಿ ಪಡಿಸಲಾಗಿದೆ. ಆದರೆ, ಕಚೇರಿಗಳು ಮಾತ್ರ ಇಲ್ಲವಾಗಿದೆ. ಬೆಳಗಾವಿ ಟೂರಿಂಗ್‌ ಟಾಕೀಸ್‌ ಆಗಿದೆ. ರಾಜ್ಯ ಮಟ್ಟದ ಕಚೇರಿಗಳು ಸ್ಥಳಾಂತರವಾಗಬೇಕು. ಸಾರ್ಕ್‌ ಸಮ್ಮೇಳನದಂತಹ ಸಮ್ಮೇಳನ ನಡೆಯಬೇಕು. ಸಮಿತಿ ಸಭೆಗಳು ನಡೆಯಬೇಕು. ಸಚಿವ ಸಂಪುಟ ಸಭೆ ನಡೆಸಬೇಕು. ಸಕ್ರಿಯವಾಗಿ ನಡೆಯುವಂತೆ ನೋಡಿಕೊಳ್ಳಬೇಕು.ಪ್ರಜಾಸೌಧ ನಿರ್ಮಾಣ:

ಕಾಂಗ್ರೆಸ್‌ ಸದಸ್ಯ ಅಜಯ್ ಸಿಂಗ್ ಮಾತನಾಡಿ, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸದಾಗಿ ರಚಿಸಲಾಗಿರುವ ಎಲ್ಲ 18 ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಕೆಕೆಆರ್‌ಡಿಬಿ ಮೂಲಕ 1,008 ಶಾಲೆಗಳಲ್ಲಿ ಯುಕೆಜಿ ಮತ್ತು ಎಲ್‌ಕೆಜಿ ಆರಂಭಿಸಿದ್ದು, 40 ಸಾವಿರಕ್ಕೂ ಹೆಚ್ಚಿನ ಮಕ್ಕಳು ಸೇರ್ಪಡೆಯಾಗಿದ್ದಾರೆ. ಅದರ ಜತೆಗೆ 2 ಸಾವಿರಕ್ಕೂ ಹೆಚ್ಚಿನ ಶಿಕ್ಷಕರನ್ನು ನೇಮಿಸಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಸ್ಥಾಪನೆಯಾಗಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಕೆಕೆಆರ್‌ಡಿಬಿಗೆ ಪ್ರಸಕ್ತ ಬಜೆಟ್‌ನಲ್ಲಿ ₹5 ಸಾವಿರ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ. 371ಜೆ ಜಾರಿಯಾಗಿದ್ದರೂ ಅನುದಾನ ಸಮರ್ಪಕವಾಗಿ ಬರುತ್ತಿಲ್ಲ ಎಂದು ಆರೋಪಿಸಿದರು. ಚರ್ಚೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಅನ್ನಪೂರ್ಣ ತುಕಾರಂ, ಚಿಮ್ಮನಕಟ್ಟಿ, ಡಿ.ಆರ್‌.ಪಾಟೀಲ, ಬಿಜೆಪಿ ಸದಸ್ಯರಾದ ಶಿವರಾಜ ಪಾಟೀಲ, ಅರವಿಂದ ಬೆಲ್ಲದ್‌ ಇತರರು ಭಾಗವಹಿಸಿ ಮಾತನಾಡಿದರು. ಮಹಾರಾಷ್ಟ್ರಕ್ಕೆ ತಿರುಗೇಟು:

ಮಹಾರಾಷ್ಟ್ರದ ಮತಿಹೀನರು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬುದಾಗಿ ನೀಡಿದ ಹೇಳಿಕೆಗೆ ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಸವದಿ ತಿರುಗೇಟು ನೀಡಿದರು. ಈ ಹಿಂದೆ ಮುಂಬೈ ಪ್ರಾಂತ್ಯಕ್ಕೆ ಬೆಳಗಾವಿ ಸೇರಿದ ಸಂದರ್ಭದಲ್ಲಿ ಈ ಭಾಗದ ಪ್ರತಿನಿಧಿಗಳು ಮುಂಬೈ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದರು. ಹೀಗಾಗಿ ನಮಗೆ ಮುಂಬೈ ಮೇಲೂ ಹಕ್ಕಿದೆ. ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂಬ ಹಕ್ಕೊತ್ತಾಯ ಮಾಡಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು. ಈ ಬಗ್ಗೆ ತೀರ್ಮಾನವಾಗುವವರೆಗೆ ಮುಂಬೈ ಕೇಂದ್ರಾಡಳಿತ ಪ್ರದೇಶವಾಗಿರಲಿ ಎಂದು ಮಹಾರಾಷ್ಟ್ರ ನಾಯಕರಿಗೆ ಟಾಂಗ್‌ ಕೊಟ್ಟರು.