ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ರಾಜ್ಯ ಸರ್ಕಾರ ಇಚ್ಛಾಶಕ್ತಿ ತೋರಿಸಿ ವೀರರಾಣಿ ಬೆಳವಡಿ ಮಲ್ಲಮ್ಮಳ ಅಭಿವೃದ್ಧಿ ಪ್ರಾಧಿಕಾರವನ್ನು ತ್ವರಿತಗತಿಯಲ್ಲಿ ರಚಿಸಬೇಕು. ಇಲ್ಲದಿದ್ದರೆ ವಕೀಲರ ಸಂಘ ಜನತೆಯೊಂದಿಗೆ ಬೈಲಹೊಂಗಲ ತಾಲೂಕನ್ನು ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಹಿರಿಯ ನ್ಯಾಯವಾದಿ ಸಿ.ಎಸ್.ಚಿಕ್ಕನಗೌಡರ ಎಚ್ಚರಿಕೆ ನೀಡಿದರು.ಪಟ್ಟಣದ ನ್ಯಾಯವಾದಿಗಳ ಸಂಘದಿಂದ ಉಪವಿಭಾಗಾಧಿಕಾರಿಗಳ ಮೂಲಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರಾಧಿಕಾರ ರಚನೆಗೆ ಒತ್ತಾಯಿಸಿ, ನ್ಯಾಯವಾದಿಗಳ ಸಂಘದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಲಾಗುವುದು ಎಂದರು.ಸರ್ಕಾರ ಪ್ರತಿವರ್ಷ ವೀರರಾಣಿ ಬೆಳವಡಿ ಮಲ್ಲಮ್ಮಳ ಉತ್ಸವವನ್ನು ಆಚರಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಮಲ್ಲಮ್ಮಳ ಕುರುಹುಗಳ, ಬೆಳವಡಿ ಗ್ರಾಮದ ಅಭಿವೃದ್ಧಿ, ರಾಕ್‌ಗಾರ್ಡನ್ ನಿರ್ಮಾಣ, ಮಲ್ಲಮ್ಮಳ ಉತ್ಸವ ಆಚರಣೆಗೆ ಜಮೀನು ಖರೀದಿ ಸೇರಿ ಇನ್ನಿತರೆ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಅತ್ಯವಶ್ಯವಾಗಿದೆ ಎಂದು ತಿಳಿಸಿದರು.ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಸುಮಾರು 2 ಸಾವಿರ ಸುಸಜ್ಜಿತ ಮಹಿಳಾ ಸೈನ್ಯ ಕಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದೊಂದಿಗೆ ಹೋರಾಡಿ ವಿಜಯಶಾಲಿಯಾಗಿ, ಶಿವಾಜಿ ಮಹಾರಾಜರಿಂದ ಸಹೋದರತ್ವ ಹೊಂದಿ ಕನ್ನಡ ಮತ್ತು ಮರಾಠಿ ಭಾಷಿಕರ ಬಾಂಧವ್ಯ ಬೆಸೆದ ಮಲ್ಲಮ್ಮಳ ಸಾಹಸ, ಶೌರ್ಯ, ನಾಡಪ್ರೇಮ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಈ ಕುರಿತು ಅನೇಕ ಹೋರಾಟ ನಡೆದರೂ ಸರ್ಕಾರ ನಿರ್ಲಕ್ಷಿಸುತ್ತಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿರಿಯ ನ್ಯಾಯವಾದಿ ಝಡ್.ಎ.ಗೋಕಾಕ ಮಾತನಾಡಿ, ಪ್ರಾಧಿಕಾರ ರಚನೆ ಹೋರಾಟಕ್ಕೆ ಪಕ್ಷಾತೀತವಾಗಿ ವಕೀಲರ ಸಂಘದಿಂದ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲಾಗುವುದು. ಮುಖ್ಯಮಂತ್ರಿಗಳು ಫೆ.28ರ ಉತ್ಸವಕ್ಕೆ ಆಗಮಿಸಿ ಬೆಳವಡಿ ಪ್ರಾಧಿಕಾರ ಘೋಷಿಸಬೇಕೆಂದು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಹಿರಿಯ ನ್ಯಾಯವಾದಿಗಳಾದ ಬಿ.ಎಂ.ಮೂಲಿಮನಿ, ಸಂಘದ ಉಪಾಧ್ಯಕ್ಷ ಅದೃಶಪ್ಪ ಸಿದ್ರಾಮಣಿ, ಕೆ.ಎಸ್.ಕುಲಕರ್ಣಿ, ಶಂಕರ ಕರೀಕಟ್ಟಿ ಮಾತನಾಡಿ, ಕಿತ್ತೂರ, ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರದಂತೆ ಬೆಳವಡಿ ಪ್ರಾಧಿಕಾರ ರಚನೆಯಾಗಬೇಕು. ವಕೀಲರ ಸಂಘ ಸದಾ ನಾಡಿನ ಹಿತಕ್ಕಾಗಿ ಜನತೆಯೊಂದಿಗೆ ಹೋರಾಟ ಮಾಡುತ್ತಾ ಬಂದಿದೆ. ಸರ್ಕಾರ ಜನರ ಆಶಾಭಾವನೆಗೆ ಸ್ಪಂದಿಸದಿರುವುದು ಖಂಡನೀಯ. ರಾಜಕಾರಣಿಗಳು ಮತಕ್ಕಾಗಿ ಮಲ್ಲಮ್ಮಳ ಹೆಸರು ಉಪಯೋಗಿಸುತ್ತಾರೆ. ಆದರೆ ಪ್ರಾಧಿಕಾರ ರಚನೆಗೆ ಹಿಂದೇಟು ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಮನವಿ ಸಲ್ಲಿಸಿ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿಠಲ ಕಟದಾಳ, ಆರ್.ಎಸ್.ಮಮದಾಪೂರ, ಎಸ್.ವೈ. ಪಾಟೀಲ, ಎಸ್.ವಿ.ಸಿದ್ದಮನಿ, ಸಿದ್ದು ಗದಗ, ಆನಂದ ತುರಮರಿ, ರಮೇಶ ಕುರಬರ, ಪಿ.ಡಿ. ಮರಕಟ್ಟಿ, ಎಸ್.ಎಂ.ಹುಕ್ಕೇರಿ, ಆರ್.ಎಸ್. ಗೌಡರ, ವಿಜಯ ಅಲಸಂದಿ, ಎಸ್.ಡಿ. ಪಾಟೀಲ, ಸಕ್ಲೇನ್ ನದಾಫ್, ಅರುಣ ಮೂಲಿಮನಿ, ಪೂಜಾ ಹೋಳಿ, ವಿವೇಕ ಚಿಕ್ಕನಗೌಡರ, ಎ.ಸಿ. ಕಕ್ಕಯ್ಯನವರ, ಎಸ್.ಜಿ.ಸಾವಳಗಿ, ಎಸ್.ಎಂ.ಸೂಳೆಭಾವಿ ಹಾಗೂ ಇತರರು ಇದ್ದರು.