ಸಾರಾಂಶ
ರಾಣಿಬೆನ್ನೂರು: ರಾಷ್ಟ್ರೀಯ ಹೆದ್ಧಾರಿಯ ಟೋಲ್‌ನಾಕಾಗಳಲ್ಲಿ ನಿಯಮಾನುಸಾರ ರೈತರ ಹಾಗೂ ಸ್ಥಳೀಯರ ವಾಹನಗಳನ್ನು ಉಚಿತವಾಗಿ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ತಾಲೂಕಿನ ಚಳಗೇರಿ ಟೋಲ್‌ನಾಕಾ ಎದುರು ಪ್ರತಿಭಟಿಸಿ ಟೋಲ್ ಸಿಬ್ಬಂದಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಟೋಲ್‌ನಾಕಾಗಳಲ್ಲಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಅಲ್ಲದೆ ರೈತರಿಗೆ ಮನಬಂದಂತೆ ಮಾತನಾಡುತ್ತಿದ್ದಾರೆ. ವಾಹನಗಳಿಂದ ಶುಲ್ಕ ಸಂಗ್ರಹಿಸುವ ಇವರು ಶೌಚಗೃಹ, ಕುಡಿಯುವ ನೀರು ಸೇರಿ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೆದ್ದಾರಿ ಪ್ರಾಧಿಕಾರದವರು ರಾಣಿಬೆನ್ನೂರು ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳು ಮತ್ತು ನಗರದಲ್ಲಿರುವಂತಹ ಟ್ಯಾಕ್ಸಿಗಳು ಮತ್ತು ಕಾರುಗಳು, ರೈತರಿಗೆ ಸಂಬಂಧಪಟ್ಟ ವಾಹನಗಳನ್ನು ಉಚಿತವಾಗಿ ಬಿಡಬೇಕು. ಸ್ಥಳೀಕರಿಗೆ ಐ.ಡಿ. ಪ್ರೂಫ್ ತೋರಿಸಿದಲ್ಲಿ ಉಚಿತವಾಗಿ ಬಿಡಬೇಕು. ರಸ್ತೆ ಸರಿಪಡಿಸುವವರೆಗೂ ಟೋಲ್ ವಸೂಲಿ ಮಾಡುವುದನ್ನು ಬಂದ್ ಮಾಡಬೇಕು. ಸಾರ್ವಜನಿಕರಿಗೆ ಶೌಚಗೃಹದ ವ್ಯವಸ್ಥೆ ಸರಿಪಡಿಸಬೇಕು. ಸರಿಯಾದ ರೀತಿಯಲ್ಲಿ ಸಂಪರ್ಕ ರಸ್ತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಯಲ್ಲಪ್ಪ ಚಿಕ್ಕಣ್ಣನವರ, ಈಶ್ವರ ಅರಳೇಶ್ವರ, ಚೇತನ ಹಂಚಿನಾಳ, ಬಸವರಾಜ ಜಿಲ್ಲೇರ, ಉಮೇಶ ಕನ್ನಪ್ಪಳವರ, ದೀಪಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.