ಸಾರಾಂಶ
ಮಸಣ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯವಾದ ಪರಿಕರಗಳನ್ನು ಒದಗಿಸಬೇಕು.
ಸಂಡೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ ಅವರ ಸಮ್ಮುಖದಲ್ಲಿ ಮಸಣ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.
ಮಸಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಎ. ಸ್ವಾಮಿ ಮಾತನಾಡಿ, ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೩೮೬ ಹಾಗೂ ಸಂಡೂರು, ಕುರೆಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ೧೮ ಮಸಣ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮಸಣ ಕಾರ್ಮಿಕರು ಇರುವುದಿಲ್ಲ ಎಂದು ವರದಿ ನೀಡಿದ್ದಾರೆ. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಸಣ ಕಾರ್ಮಿಕರ ಪಟ್ಟಿಗೆ ಅನುಮೋದನೆ ನೀಡಬೇಕು ಎಂದರು. ಮಸಣ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯವಾದ ಪರಿಕರಗಳನ್ನು ಒದಗಿಸಬೇಕು. ಮಸಣಗಳು ಒತ್ತುವರಿಯಾಗುತ್ತಿದ್ದು, ಅವುಗಳನ್ನು ಹದ್ದುಬಸ್ತುಗೊಳಿಸಬೇಕು. ಮಸಣಗಳಲ್ಲಿ ಶೌಚಾಲಯ, ನೀರು ಮತ್ತು ನೆರಳಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಮಸಣ ಕಾರ್ಮಿಕರಿಗೆ ಭವಿಷ್ಯ ನಿಧಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು. ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಅವರು ಮಸಣ ಕಾರ್ಮಿಕರ ಬೇಡಿಕೆಗಳನ್ನು ಆಲಿಸಿ, ಅವುಗಳ ಈಡೇರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಮಸಣ ಕಾರ್ಮಿಕರ ಸಂಘದ ಸದಸ್ಯರಾದ ರಾಜಣ್ಣ, ಮಾರೆಪ್ಪ, ಕುಮಾರಸ್ವಾಮಿ, ಫಕ್ಕೀರಪ್ಪ, ಲಕ್ಷ್ಮಣ, ಕರ್ನಾಟಕ ಪ್ರಾಂತ ರೈತ ಸಂಘದ ಖಲಂದರ್ ಬಾಷ ಉಪಸ್ಥಿತರಿದ್ದರು.