ಕೇವಲ ಅಪಘಾತ ಸಂಬಂಧಿಸಿದ ಕೆಲ ಪರಿಹಾರ ನೀಡುವ ಯೋಜನೆಗಳನ್ನು ಜಾರಿಮಾಡಲಾಗುತ್ತಿದೆ.

ಹೊಸಪೇಟೆ: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್‌ ಕಾರ್ಡ್‌ ಪಡೆದ ಹಮಾಲಿ ಕಾರ್ಮಿಕರು ಸೇರಿದಂತೆ 85ಕ್ಕೂ ಹೆಚ್ಚು ವಲಯದ ಅಸಂಘಟಿತ ಕಾರ್ಮಿಕರಿಗೆ ಕೇವಲ ಅಪಘಾತ ಸಂಬಂಧಿಸಿದ ಕೆಲ ಪರಿಹಾರ ನೀಡುವ ಯೋಜನೆಗಳನ್ನು ಜಾರಿಮಾಡಲಾಗುತ್ತಿದೆ. ಆದರೆ, ಸರ್ಕಾರ ನಿರ್ದಿಷ್ಟವಾಗಿ ಯಾವುದೇ ಹಣಕಾಸಿನ ನೆರವು ನೀಡಿಲ್ಲ. ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮ-2024ರ ಅಡಿ ರಚಿಸಲಾಗುತ್ತಿರುವ ಮಂಡಳಿಯಿಂದ ಸಾರಿಗೆ ಸಂಬಂಧಿತ ಲೋಡಿಂಗ್, ಅನ್ ಲೋಡಿಂಗ್ ಕಾರ್ಮಿಕರನ್ನು ಒಳಗೊಂಡು ವಿವಿಧ ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ಕೆಲ ಸೌಲಭ್ಯಗಳನ್ನು ಘೋಷಿಸಲಾಗಿರುವುದು ಸ್ವಾಗತಾರ್ಹವಾಗಿದೆ. ಈ ಮಂಡಳಿಯಡಿ ಹಮಾಲಿ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಬೇಕು. ಒಟ್ಟಾರೆ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಹಣಕಾಸು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಯೋಜನೆಯನ್ನು ರೂಪಿಸಿ ಸಮಗ್ರ ಸಾಮಾಜಿಕ ಭದ್ರತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.ಇನ್ನೊಂದಡೆ ಎಪಿಎಂಸಿಯಲ್ಲಿ ಶ್ರಮಿಕರ ಪರಿಹಾರದಡಿ ಮರಣ ಪರಿಹಾರ ₹5 ಲಕ್ಷ ನೀಡಲು

ತೀರ್ಮಾನಿಸಲಾಗಿದ್ದು ಸ್ವಾಗತಾರ್ಹವಾಗಿದೆ. ಎಪಿಎಂಸಿಯಲ್ಲಿ ನಿವೃತ್ತರಾಗುವವರಿಗೆ ಕನಿಷ್ಟ ಒಂದು ಲಕ್ಷ ನಿವೃತ್ತಿ ಪರಿಹಾರ ಅಥವಾ ಇಡುಗಂಟು ನೀಡಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಬದುಕಿರುವಾಗ ಸಹಾಯವಾಗುವಂತ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳು:

ರಾಜ್ಯದ ಲೋಡಿಂಗ್, ಅನ್‌ಲೋಡಿಂಗ್ (ಹಮಾಲಿ) ಕಾರ್ಮಿಕರಿಗೆ ಮಹಾರಾಷ್ಟ್ರ, ಕೇರಳ ಮಾದರಿಯಲ್ಲಿ ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು. ಗುರುತಿಸಲಾದ ಅಸಂಘಟಿತ ಕಾರ್ಮಿಕರಿಗೆ ಜಾರಿಮಾಡುತ್ತಿರುವ ಸೌಲಭ್ಯಗಳೊಂದಿಗೆ ಸಹಜ ಮರಣಕ್ಕೂ ಒಂದು ಲಕ್ಷ ಪರಿಹಾರ ನೀಡಬೇಕು, ಶವ ಸಂಸ್ಕಾರ ಪರಿಹಾರದ ಮೊತ್ತವನ್ನು ₹25 ಸಾವಿರಕ್ಕೆ ಹೆಚ್ಚಿಸಬೇಕು. ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ, "ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ " (ಪಶ್ಚಿಮ ಬಂಗಾಳ ಮಾದರಿ), ಹಾಗೂ ಸೂಕ್ತ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಈ ಹಿಂದೆ ಪ್ರಾರಂಭಿಸಲಾದ “ಕಾಯಕ ನಿಧಿ " ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಸರ್ಕಾರದಿಂದ ಹಾಗೂ ಹಿಂದಿನಂತೆ ಎಪಿಎಂಸಿ ಸಮಿತಿಗಳಿಂದ ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರೆಸಬೇಕು. 60 ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಒಂದು ಲಕ್ಷ ನಿವೃತ್ತಿ ಪರಿಹಾರ ನೀಡಬೇಕು. ಪ್ರತಿವರ್ಷ 2 ಜೋತೆ ಸಮವಸ್ತ್ರ ನೀಡಬೇಕೆಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಎಂ. ಗೋಪಾಲ್‌, ವಿ. ಸ್ವಾಮಿ, ಎಸ್‌, ರಾಮಪ್ಪ, ಪರಸಪ್ಪ, ಮರಿಕಣಿಮೆಪ್ಪ, ಮಂಜುನಾಥ, ಬಸವರಾಜ್‌, ಈರಣ್ಣ, ಕೇಶವ್‌, ಪರಶುರಾಮ ಮತ್ತಿತರರಿದ್ದರು.