ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಕೊಲ್ಹಾರ ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯ ಸಂತ್ರಸ್ತರಿಗೆ ಸೂಕ್ತ ನಿವೇಶನ ಹಂಚಿಕೆ ಮಾಡದಿರುವುದು, ದಾಖಲೆಗಳ ನೆಪವೊಡ್ಡಿ ಉತಾರ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೊಲ್ಹಾರ ತಾಲೂಕು ಘಟಕ) ನೇತೃತ್ವದಲ್ಲಿ ಗುರುವಾರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಕೊಲ್ಹಾರ ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯ ಸಂತ್ರಸ್ತರಿಗೆ ಸೂಕ್ತ ನಿವೇಶನ ಹಂಚಿಕೆ ಮಾಡದಿರುವುದು, ದಾಖಲೆಗಳ ನೆಪವೊಡ್ಡಿ ಉತಾರ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೊಲ್ಹಾರ ತಾಲೂಕು ಘಟಕ) ನೇತೃತ್ವದಲ್ಲಿ ಗುರುವಾರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಸೋಮು ಬಿರಾದಾರ ಹಾಗೂ ಮುಳುಗಡೆ ಸಂತ್ರಸ್ತರು, ಸಂಬಂಧಪಟ್ಟ ಎಲ್ಲ ಹಿರಿಯ ಅಧಿಕಾರಿಗಳು ಸೆ.16ರ ಒಳಗಡೆ ಕೊಲ್ಹಾರ ಸ್ಥಳಕ್ಕೆ ಆಗಮಿಸಿ ಮುಳುಗಡೆ ಸಂತ್ರಸ್ತರ ಸಂತ್ರಸ್ತರ ಸಮಸ್ಯೆ ಆಲಿಸಿ ಭರವಸೆ ನೀಡಬೇಕು, ಇಲ್ಲದಿದ್ದರೆ 16ರಂದು ಕೊಲ್ಹಾರ ಸೇತುವೆ ಮೇಲೆ ಹೆದ್ದಾರಿ ತಪ್ದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ಸಮ್ಮುಖದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಬೇಕು.

ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೊಲ್ದಾರ ಸೇತುವೆ ಬಂದ್ ಮಾಡಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.

ತಾಲೂಕು ಘಟಕದ ಉಪಾಧ್ಯಕ್ಷ ಕಲ್ಲಪ್ಪ ಗಿಡ್ಡಪ್ಪಗೋಳ, ರಮೇಶ ಬೀಳಗಿ, ಶಶಿಕಾಂತ ಬಿರಾದಾರ, ಸತೀಶ ಕುಲ್ಲಳ್ಳಿ, ಮುದಕನ್ನ ಚಲವಾದಿ, ಯಮನಪ್ಪ ಬಿಸ್ಟಗೊಂಡ, ಸಂಗಪ್ಪ ಗುಳಗೊಂಡ ಸೇರಿದಂತೆ ಹಲವು ಸಂತ್ರಸ್ತರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

ರೈತರ ಪ್ರಮುಖ ಬೇಡಿಕೆಗಳು:

-ತಾರತಮ್ಯ ತಡೆ ಹಾಗೂ ಉತಾರೆ ವಿತರಣೆ: ನಿವೇಶನ ಹಂಚಿಕೆಯಲ್ಲಿ ನಡೆಯುತ್ತಿರುವ ತಾರತಮ್ಯ ತಡೆಯಬೇಕು. ಸಿಒಡಿ ಕೇಸ್ ಹೊರತುಪಡಿಸಿ, ಉಳಿದ ನೈಜ ಮೂಲ ಸಂತ್ರಸ್ತರಿಗೆ ಮೇಲಧಿಕಾರಿಗಳ ಆದೇಶ ಪ್ರತಿ ಅಥವಾ ಭೂ-ಹಿಡುವಳಿ ನೆಪ ಹೇಳದೆ ತಕ್ಷಣ ಉತಾರ ನೀಡಬೇಕು.

-ಸಿಒಡಿ ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಹಾಗೂ ವರದಿ ವಿಳಂಬಕ್ಕೆ ಕಾರಣ ತಿಳಿಸಬೇಕು.

-ಕುಟುಂಬದ ಕಲಹ ತಪ್ಪಿಸಲು ಸಂತ್ರಸ್ತ ಕುಟುಂಬದ ಎಲ್ಲ ಮಕ್ಕಳಿಗೂ ನಿವೇಶನ ಹಂಚಿಕೆ ಮಾಡಬೇಕು. ಬಡತನದಿಂದಾಗಿ ಮಾರಾಟ ಮಾಡಿದ/ಪಡೆದ ನಿವೇಶನಗಳ ರದ್ದು ಆದೇಶ ಹಿಂಪಡೆಯಬೇಕು.

-ಅಸಮರ್ಪಕ ಒಳಚರಂಡಿ ಕಾಮಗಾರಿ ಸರಿಪಡಿಸಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.

- ಮುಳವಾಡ ಏತ ನೀರಾವರಿ ಎ ಮತ್ತು ಬಿ ಸ್ಕೀಮ್ ಕಾಲುವೆ ಮೂಲಕ ಅಖಂಡ ವಿಜಯಪುರ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು.

ರೈತರ ಜಮೀನುಗಳಿಗೆ ನಿರಂತರವಾಗಿ 2 ಫೇಸ್ ಹಾಗೂ 3 ಫೇಸ್ ವಿದ್ಯುತ್ ಪೂರೈಸಬೇಕು.