ಸಾರಾಂಶ
ಕೊರಗ ಸಮುದಾಯದ ಶಿಕ್ಷಣ ಪಡೆದ ಯುವಜನರಿಗೆ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿ ನೀಡಬೇಕು ಎಂದು ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸರ್ಕಾರಕ್ಕೆ ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೊರಗ ಸಮುದಾಯದ ಶಿಕ್ಷಣ ಪಡೆದ ಯುವಜನರಿಗೆ ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿ ನೀಡಬೇಕು ಎಂದು ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸರ್ಕಾರಕ್ಕೆ ಒತ್ತಾಯಿಸಿದೆ. ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಘಟನೆಯ ಸತತ 30 ವರ್ಷಗಳ ಪ್ರಯತ್ನದಿಂದಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ,ಸ್ನಾತಕೋತ್ತರ, ಡಾಕ್ಟರೇಟ್, ವೈದ್ಯಕೀಯ, ಕಾನೂನು ಪದವಿ, ತಾಂತ್ರಿಕ ಕೋರ್ಸ್, ನರ್ಸಿಂಗ್, ಡಿಎಡ್, ಬಿಎಡ್ ಸೇರಿದಂತೆ ಇನ್ನಿತರ ವೃತ್ತಿಪರ ಶಿಕ್ಷಣಗಳನ್ನು ಸಮುದಾಯದ ಯುವಜನರು ಪಡೆಯಲು ಸಾಧ್ಯವಾಯಿತು. ಆದರೆ ಶಿಕ್ಷಣ ಪಡೆದ ಯುವಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.2023ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಕ್ಕೆ ಭೇಟಿ ನೀಡಿದಾಗ ಕೊರಗ ಸಂಘಟನೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಯುವಜನರಿಗೆ ಶೇ.100 ಉದ್ಯೋಗ ಭದ್ರತೆಗೆ ಸಂಬಂಧಿಸಿ ಕಾಲಬದ್ಧ ಕ್ರಿಯಾ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವಂತೆ ಸೂಚಿಸಿದ್ದರು.ಕೊರಗ ಸಮುದಾಯವು ಅತ್ಯಂತ ಹಿಂದುಳಿದ ಅಸಹಾಯಕ ದುರ್ಬಲ ಬುಡಕಟ್ಟು ಪಂಗಡವಾಗಿದ್ದು, ಮಣಿವನ್ನನ್ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ವಿದ್ಯಾವಂತ ಯುವಜನರ ಸರ್ವೇ ಕಾರ್ಯ ನಡೆಸಲಾಗಿತ್ತು. ಆದರೆ ಹಠಾತ್ತನೆ ಬುಡಕಟ್ಟು ಕಲ್ಯಾಣ ಇಲಾಖೆಯ ಜವಾಬ್ದಾರಿಯಿಂದ ಅವರನ್ನು ವಿಯುಕ್ತಿಗೊಳಿಸಲಾಯಿತು. ಅನಂತರ ಸಂಬಂಧಿಸಿದ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದರಿಂದ ಯುವಜನರು ಉದ್ಯೋಗವಿಲ್ಲದೇ ಮಾನಸಿಕ ಒತ್ತಡದಿಂದ ಆತ್ಮವಿಶ್ವಾಸ ಕಳೆದುಕೊಂಡು ಬದುಕುವಂತಾಗಿದೆ ಎಂದರು.ಇದಲ್ಲದೇ ಪದವಿ ಪಡೆದ ಯುವಜನರನ್ನು ಕೂಡ ಕೇವಲ ಗ್ರಾ.ಪಂ., ಪ.ಪಂ., ಪುರಸಭೆ, ನಗರಸಭೆಗಳಲ್ಲಿ ಸ್ವಚ್ಛತೆ ಕೆಲಸಗಳಿಗೆ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಆದಿವಾಸಿ ಕೊರಗ ಸಮುದಾಯದ ಜನರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಕುಲಕಸುಬಿನ ಉತ್ಪನ್ನಗಳನ್ನು ಬ್ರ್ಯಾಂಡ್ ಉತ್ಪನ್ನವಾಗಿಸಬೇಕು. ಈಗಾಗಲೇ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೀಡಿದ 800 ಭೂ ರಹಿತ ಅರ್ಜಿದಾರರಿಗೆ ಕನಿಷ್ಠ 1 ಎಕ್ರೆ ಕೃಷಿ ಭೂಮಿಯ ಹಕ್ಕುಪತ್ರ ಒದಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಉಡುಪಿ ಮತ್ತು ದ.ಕ. ಜಿಲ್ಲೆಯ ಆದಿವಾಸಿ ಬುಡಕಟ್ಟು ಕೊರಗ ಜನಾಂಗ ಜನಸಂಖ್ಯೆ ಇಳಿಮುಖವಾಗುತ್ತಿರುವುದು ಹದಗೆಟ್ಟ ಆರೋಗ್ಯ, ರಕ್ತ ಹೀನತೆ ಮತ್ತು ಆಹಾರದ ಪರಿಸ್ಥಿತಿಗಳು, ಸಾಮಾಜಿಕ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿದೆ. ಕೇವಲ 20 ವರ್ಷಗಳಲ್ಲಿ ನಮ್ಮ ಜನಸಂಖ್ಯೆ ಶೇ.30 ರಷ್ಟು ಕಡಿಮೆಯಾಗಿದೆ. ಈ ಬಗ್ಗೆ ಸಮಗ್ರ ಆರೋಗ್ಯ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು. ಇದಕ್ಕಾಗಿ ವಾರ್ಷಿಕ 2 ಕೋಟಿ ರು. ಅನುದಾನ ಒದಗಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಕೆ. ಪುತ್ರನ್, ದಿವಾಕರ್, ಚಂದ್ರ ಕೊಕ್ಕರ್ಣೆ, ಬೊಗ್ರ ಕೊರಗ ಉಪಸ್ಥಿತರಿದ್ದರು.