ಕನ್ನಡಪ್ರಭ ವಾರ್ತೆ, ತುಮಕೂರುಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ತೀರ್ಮಾನವನ್ನು ಮರು ಪರಿಶೀಲಿಸುವಂತೆ ಸರ್ಕಾರ ದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿರುವ ರಾಜ್ಯಪಾಲರ ಕ್ರಮ ವಿರೋಧಿಸಿ, ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ,ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾಧ್ಯಕ್ಷ ಅರುಣ್‌ ಕೃಷ್ಣಯ್ಯ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕನ್ನಡ ವಿರೋಧಿ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಘೋಷಣೆ ಕೂಗಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಹಿಂದಿ ಹೇರಿಕೆಗೆಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ದ ಕ್ರಮ ಸ್ವಾಗತಾರ್ಹವಾಗಿದ್ದು, ಸರ್ಕಾರ ನಿರ್ಧಾರವನ್ನು ಪ್ರಶ್ನಿಸುವ ರಾಜ್ಯಪಾಲರ ನೀತಿ ದುರದೃಷ್ಟಕರ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಬೇಕು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಸರ್ಕಾರ , ಹಿಂದಿ ಭಾಷೆಯ ಪರೀಕ್ಷೆಗೆ ಅಂಕಗಳ ಬದಲಾಗಿ, ಗ್ರೇಡ್ ನೀಡುವ ಪದ್ದತಿಯನ್ನು ಜಾರಿಗೆ ತಂದಿದೆ. ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯಲು ಯಾರು ಅಡ್ಡಿ ಪಡಿಸುತ್ತಿಲ್ಲ. ಆದರೆ ಬಲವಂತವಾಗಿ ಹೇರುವುದಕ್ಕೆ ನಮ್ಮ ವಿರೋಧವಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಡೆ ಸ್ವಾಗತಾರ್ಹ. ಕಳೆದ ಐವತ್ತು ವರ್ಷಗಳಿಂದ ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಆದರೆ ಕನ್ನಡ ನಾಡಿನ ಆಡಳಿತದ ಮುಖ್ಯಸ್ಥರಾಗಿ, ಚುನಾಯಿತ ಸರ್ಕಾರ ದ ನಡೆಯನ್ನು ಮರು ಪರಿಶೀಲಿಸುವಂತೆ ಸರ್ಕಾರ ದ ಮುಖ್ಯ ಕಾರ್ಯದರ್ಶಿಯವರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಇಂತಹ ಕನ್ನಡ ವಿರೋಧಿ ರಾಜ್ಯಪಾಲರ ಅಗತ್ಯ ಕನ್ನಡ ನಾಡಿಗೆ ಇಲ್ಲ. ಹಾಗಾಗಿ ಅವರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

ರಾಜ್ಯದಲ್ಲಿ ನಡೆದ ಗೋಕಾಕ್ ಚಳವಳಿಯನ್ನು ಮತ್ತೊಮ್ಮೆ ರಾಜ್ಯದ ಜನರಿಗೆ ನೆನಪು ಮಾಡಬೇಕಿದೆ. ಹಿಂದೊಮ್ಮೆ ಹಿಂದಿಯನ್ನು ಕರ್ನಾಟಕದ ಮೇಲೆ ಬಲವಂತವಾಗಿ ಹೇರಲು ಮುಂದಾದಾಗ ನಾಡಿನೆಲ್ಲಡೆ ಸಿನಿಮಾ ನಟರು, ಹೋರಾಟಗಾರರು ಎಲ್ಲರೂ ಸೇರಿ ಗೋಕಾಕ್ ಚಳವಳಿ ನಡೆಸಿದ್ದರು. ಈಗ ಮತ್ತೊಮ್ಮೆ ಆದೇ ರೀತಿಯ ಪ್ರತಿಭಟನೆ ಅಗತ್ಯವಿದೆ ಎಂಬ ಪರಿಸ್ಥಿತಿ ಉಂಟಾಗಿದೆ. ನೆರೆಯ ತಮಿಳುನಾಡು, ಮಹಾರಾಷ್ಟ್ರಗಳಲ್ಲಿಯೂ ಹಿಂದಿ ಹೇರಿಕೆಯನ್ನು ವಿರೋಧಿಸಿ, ದ್ವಿಭಾಷಾ ನೀತಿಯನ್ನು ಜಾರಿಗೆ ತರಲಾಗಿದೆ.ಆದರೆ ಕರ್ನಾಟಕದಲ್ಲಿ ಮಾತ್ರ ರಾಜ್ಯಪಾಲರು ಪದೇ ಪದೇ ಸರ್ಕಾರ ದ ನೀತಿಗಳಲ್ಲಿ ಹಸ್ತಕ್ಷೇಪ ಮಾಡಿ, ಅದರಲ್ಲಿಯೂ ಕನ್ನಡ ಭಾಷೆಯ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಿರುವುದು ತರವಲ್ಲ. ರಾಜ್ಯಪಾಲರಿಗೆ ಹಿಂದಿ ಭಾಷೆಯ ಮೇಲೆ ಅಷ್ಟೊಂದು ಒಲವು ಇದ್ದರೆ ಉತ್ತರ ಭಾರತದ ರಾಜ್ಯಗಳಿಗೆ ಹೋಗಲಿ, ರಾಷ್ಟ್ರಪತಿಗಳು ಕೂಡಲೇ ಕರ್ನಾಟಕದಿಂದ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್ ಅವರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಅರುಣ್‌ಕೃಷ್ಣಯ್ಯಆಗ್ರಹಿಸಿದರು. ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ವೇಳೆ ಕರವೇ ಪ್ರಧಾನ ಕಾರ್ಯದರ್ಶಿ ಅಂಬರೀಷ್, ಉಪಾಧ್ಯಕ್ಷರಾದ ಆದೇಶ್, ರಾಜೇಶ್, ಮಹಿಳಾ ಪ್ರಧಾನ ಕಾರ್ಯದರ್ಶಿ ರಾಧಾ ಗೌಡ, ವಿವಿಧ ತಾಲೂಕು ಅಧ್ಯಕ್ಷರುಗಳಾದ ಕೊರಟಗೆರೆ ನಟರಾಜು, ಶಶಿಕುಮಾರ್, ಯುವಘಟಕದ ಪವನ್, ಅರುಣ್, ಚಿಕ್ಕನಾಯಕನಹಳ್ಳಿ ಮಾಲಾ, ಶಕುಂತಲ, ಹೇಮ, ರೇಖಾ, ಪಾವರ್ತಮ್ಮ ಸೇರಿದಂತೆ ಹಲವರು ಜೊತೆಗಿದ್ದರು.