ಆರೋಗ್ಯ ಕೇಂದ್ರದ ಪರಿಸರ ರಕ್ಷಣೆ ಮಾಡಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಕೇಂದ್ರದ ಸಿಬ್ಬಂದಿ ಆಗ್ರಹಿಸಿದರು.
ಗದಗ: ಕಳೆದ ಹಲವಾರು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ದನ- ಕರುಗಳು ಮತ್ತು ಪ್ರವೇಶದ್ವಾರದ ಮುಂದೆಯೇ ತಿಪ್ಪೆಗಳು ರಾರಾಜಿಸುತ್ತಿವೆ. ಆದ್ದರಿಂದ ಆರೋಗ್ಯ ಕೇಂದ್ರದ ಪರಿಸರ ರಕ್ಷಣೆ ಮಾಡಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಕೇಂದ್ರದ ಸಿಬ್ಬಂದಿ ಆಗ್ರಹಿಸಿದರು.
ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಸಮಸ್ಯೆ ಕುರಿತು ವೈದ್ಯರು ತಿಳಿಸಿ, ಆವರಣದಲ್ಲಿ ದನಕರುಗಳು ನುಗ್ಗುತ್ತವೆ. ಇದರಿಂದ ರೋಗಿಗಳು ಸಂಚರಿಸಲು ತೊಂದರೆಯಾಗುತ್ತದೆ. ಪ್ರವೇಶ ದ್ವಾರದ ಮುಂದೆಯೇ ತಿಪ್ಪೆಗಳನ್ನು ತೆಗೆಸಬೇಕು. ಕುಡಿಯುವ ನೀರಿನ ಸಮಸ್ಯೆ, ಮಹಿಳೆಯರಿಗೆ ಬೇರೆ ರಕ್ತ ತಪಾಸಣೆ ಕೊಠಡಿ ಕಲ್ಪಿಸುವುದರ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತಾಧಿಕಾರಿಗಳು ತಿಳಿಸಿದರು.ಅಂಗನವಾಡಿ 93 ಕೇಂದ್ರವು ಈಗ ಕೆಜಿಎಸ್ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದೆ. ಜೂನ್ ತಿಂಗಳವರೆಗೂ ಮಾತ್ರ ಅಲ್ಲಿ ಸ್ಥಳಾವಕಾಶವಿದೆ. ಗ್ರಾಮ ಚವಡಿ ಎದುರು ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಕಾರ್ಯಕರ್ತೆ ಯೋಗಿನಿ ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು.
ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅನುದಾನ ಕುರಿತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಯೊಂದಿಗೆ ಚರ್ಚಿಸಲಾಗುವುದು. ಅಲ್ಲಿಯವರೆಗೆ ಗ್ರಾಮ ಚವಡಿಯಲ್ಲಿ ಅಂಗನವಾಡಿ ನಡೆಸಲು ಗ್ರಾಮ ಲೆಕ್ಕಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಆಡಳಿತಾಧಿಕಾರಿ ಶರಣು ಗೋಗೇರಿ ಭರವಸೆ ನೀಡಿದರು.ಉಳಿದಂತೆ ಅಂಗನವಾಡಿಯಲ್ಲಿ ಕುಡಿಯುವ ನೀರು, ಸ್ವಚ್ಛತೆ, ಬಗ್ಗೆ ಚರ್ಚಿಸಲಾಯಿತು. ಗ್ರಾಪಂ ಮಟ್ಟದ ಮಹಿಳಾ ಸಂಜೀವಿನಿ ಒಕ್ಕೂಟದ ಚಂದ್ರಕಲಾ ಮಾಡಲಗೇರಿ ಅವರು ತಮ್ಮ ಸಂಘವು ಮಹಿಳೆಯರಿಗೆ ಉದ್ಯೋಗ ಮಾಡಲು ಸಾಲವನ್ನು ಒದಗಿಸಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ. ಸಂಘದ ಕಾರ್ಯ ಚಟುವಟಿಕೆ ನಡೆಸಲು ನಿವೇಶನ ಒದಗಿಸಿ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪಶು ಚಿಕಿತ್ಸಾಲಯದ ನಿವೇಶನಕ್ಕೆ ಗ್ರಾಮದ ಕದಾಂಪುರ ರಸ್ತೆಗೆ ಹೊಂದಿಕೊಂಡಿರುವ ಗ್ರಾಪಂ ಜಾಗದಲ್ಲಿ ಸಾರ್ವಜನಿಕರು ಬಣವಿ, ತಿಪ್ಪೆಗಳನ್ನು ಹಾಕಿದ್ದು, ಈ ಜಾಗವನ್ನು ತೆರವುಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಕಟ್ಟಡ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಅನುದಾನ ವಾಪಸ್ ಹೋಗುತ್ತದೆ ಎಂದು ಪಶು ಚಿಕಿತ್ಸಾಲಯ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಉತ್ತರಿಸಿ ರೈತರನ್ನು ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತಾಧಿಕಾರಿ ಹಾಗೂ ಪಿಡಿಒ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಶರಣು ಗೋಗೇರಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಅನುದಾನವನ್ನು ಹೊರತುಪಡಿಸಿ ಸಾರ್ವಜನಿಕರೊಂದಿಗೆ ಪರಸ್ಪರ ಸಹಾಯ, ಸಹಕಾರ ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇರುವ ದೊಡ್ಡ ಗೇಟ್‌ಗೆ ಬೀಗ ಹಾಕಿ ಸಣ್ಣ ಗೇಟ್‌ಅನ್ನು ನಿರ್ಮಿಸಿಕೊಳ್ಳಬೇಕು. ತಿಪ್ಪೆ ತೆಗೆಸಲು ಕ್ರಮ ವಹಿಸಲಾಗುವುದು. ಗ್ರಾಮದ ಸುತ್ತಮುತ್ತಲಿನ ಹತ್ತು ಗ್ರಾಮಗಳಿಗೆ ಅನುಕೂಲವಾಗುವ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಿಸಲು ಸರ್ಕಾರ ಅನುದಾನ ಮಂಜೂರು ಮಾಡಿದ್ದು, ಸಾರ್ವಜನಿಕರು ಆ ಜಾಗದಲ್ಲಿರುವ ಬಣವಿ, ತಿಪ್ಪೆಗಳನ್ನು ತೆಗೆದು ಸಹಕಾರ ನೀಡಬೇಕು. ಗ್ರಾಮವು ವಿಶ್ವ ಪರಂಪರೆಗೆ ಸೇರಲು ಎಲ್ಲ ಅರ್ಹತೆಗಳನ್ನು ಪಡೆಯಲು ಸರ್ಕಾರ ಪ್ರಯತ್ನ ನಡೆಸಿದ್ದು, ಸ್ವಾರಕಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಈ ವೇಳೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ಪಿಡಿಒ ಅಮೀರನಾಯಕ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೈ.ಎಚ್. ತೆಕ್ಕಲಕೋಟಿ, ಮಹೇಶ ಮುಸ್ಕಿನಭಾವಿ, ಡಾ. ನಿವೇದಿತಾ ಬಡಿಗೇರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಕಾರ್ಯದರ್ಶಿ ಎಂ.ಎ. ಗಾಜಿ ಸ್ವಾಗತಿಸಿದರು.