ಪಿಂಜಾರ್‌ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಆಗ್ರಹ

| Published : Jul 25 2024, 01:30 AM IST

ಪಿಂಜಾರ್‌ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನೂತನವಾಗಿ ಘೋಷಿಸಿರುವ ಪಿಂಜಾರ/ನದಾಫ್ ಹಾಗೂ ಇತರೆ ೧೩ ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಾದಾ/ಪಿಂಜಾರ ಸಂಘ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನೂತನವಾಗಿ ಘೋಷಿಸಿರುವ ಪಿಂಜಾರ/ನದಾಫ್ ಹಾಗೂ ಇತರೆ ೧೩ ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಾದಾ/ಪಿಂಜಾರ ಸಂಘ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಆಯುಬ್ ನದಾಫ್ ಮಾತನಾಡಿ, ರಾಜ್ಯಾದ್ಯಂತ ಸುಮಾರು ೨೨ ರಿಂದ ೨೫ ಲಕ್ಷಗಳ ಜನಸಂಖ್ಯೆ ಹೊಂದಿರುವ ನದಾಫ್/ಪಿಂಜಾರ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದ ಮತ್ತು ಕಡುಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿರುವ ಶೋಷಿತ ಸಮಾಜವಾಗಿದೆ. ಈ ಜನಾಂಗ ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತರ) ಪಂಗಡದಲ್ಲಿದ್ದರೂ ಸರ್ಕಾರದ ವೃತ್ತಿಪರ ಜಾತಿಗಳ ವಿಂಗಡನೆ ಅನ್ವಯ ನದಾಫ್/ಪಿಂಜಾರ ಉಪ ಪಂಗಡಕ್ಕೆ ಸೇರಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ಪ್ರವರ್ಗ-೧ರ ಮೀಸಲಾತಿ ಹೊಂದಿದೆ ಎಂದರು.ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸತತವಾಗಿ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಯಾವುದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗುತ್ತಿದ್ದಾರೆ. ಇದರ ನಿವಾರಣೆಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿ ಸಮಾಜದ ಅಭಿವೃದ್ಧಿಗೆ ನೇರವಾಗಿ ಅನುಕೂಲವಾಗಲೆಂದು ಪ್ರತ್ಯೇಕ ನಿಗಮ ಮಂಡಳಿಗೆ ಬೇಡಿಕೆ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ಹಿಂದಿನ ಸರ್ಕಾರ ಈ ಸಮಾಜದ ತೊಂದರೆಗಳನ್ನು ಗಮನಿಸಿ ಸಾಮಾಜಿಕ ಕಳಕಳಿಯಿಂದ ಜನಾಂಗಕ್ಕೆ ನೇರವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪಿಂಜಾರ-ನದಾಫ್ ಹಾಗೂ ಇತರೆ ೧೩ ಜಾತಿಗಳ ಅಭಿವೃದ್ಧಿ ನಿಗಮದ ಆದೇಶದೊಂದಿಗೆ ಘೋಷಣೆ ಮಾಡಿದೆ. ನಂತರ ಈ ಹೊಸ ಸರ್ಕಾರ ಬಂದನಂತರ ಸಮಾಜದ ಹಿತದೃಷ್ಟಿಯಿಂದ ಹಾಗೂ ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ಬಜೆಟ್‌ನಲ್ಲಿ ಅಥವಾ ವಿಶೇಷ ಪ್ಯಾಕೇಜ್‌ ಮೂಲಕ ಅವಶ್ಯಇರುವ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಬಡವರ ಪರ, ಸಾಮಾಜಿಕ ನ್ಯಾಯ ನೀಡುವ ದಿಟ್ಟವಾದ ಕಾಂಗ್ರೆಸ್‌ ಸರ್ಕಾರ ಎಂದು ಚುನಾವಣೆ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಪ್ರಚಾರ ಮಾಡಿದೆ. ಆದರೂ ರಾಜ್ಯದಲ್ಲಿ ಸುಮಾರು ೨೫ ಲಕ್ಷ ಜನಸಂಖ್ಯೆ ಹೊಂದಿದ ನಮ್ಮಂತಹ ಅತ್ಯಂತ ಬಡ ಸಮಾಜಗಳನ್ನು ಕಡೆಗಣನೆ ಮಾಡಿರುವುದು, ಜತೆಗೆ ನಿರ್ಲಕ್ಷ್ಯ ತೋರುವುದು ಸಮಾಜಕ್ಕೆ ಮಾಡುವ ಘೋರ ಅನ್ಯಾಯವಾಗಿದೆ. ತಕ್ಷಣ ಪಿಂಜಾರ-ನದಾಫ್ ಪ್ರತ್ಯೇಕ ನಿಗಮಕ್ಕೆ ಅವಶ್ಯ ಇರುವ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಹಿಬೂಬ್ ಹತ್ತಳ್ಳಿ, ಮೌಲಾಸಾಬ್ ನದಾಫ್, ಅಬ್ದುಲ್ ಕರೀಮ ನದಾಫ್, ಮೈಬೂಬ್ ನೇಗನಾಳ, ಹುಸೇನ್ ಸಾಬ್ ರೋಗಿ, ನದೀಮ ನದಾಫ್, ಸಮೀರ್ ಪಟಾನ್, ಮಹಿಬೂಬ್.ಬಿ. ನದಾಫ್ ಮುಂತಾದವರು ಇದ್ದರು.