ಸಾರಾಂಶ
ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಕ್ರಾಂತಿ ಸೇನಾ ಜಿಲ್ಲಾ ಮಹಿಳಾ ಸಂಘಟನೆ ವತಿಯಿಂದ ಸೋಮವಾರ ಗದಗ ನಗರದಲ್ಲಿ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಗದಗ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಕ್ರಾಂತಿ ಸೇನಾ ಜಿಲ್ಲಾ ಮಹಿಳಾ ಸಂಘಟನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ರಾಣಿ ಚಂದಾವರಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಗಲು ಹೊತ್ತಿನಲ್ಲಿಯೇ ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಕಾಲೇಜ್ ಕ್ಯಾಂಪಸ್‌ನಲ್ಲಿ ಕೊಲೆ ಮಾಡಲಾಯಿತು. ಅದು ಆದ ಕೆಲವೇ ದಿನಗಳಲ್ಲಿ ಈಗ ಅಂಜಲಿ ಕೊಲೆ ಆಗಿದೆ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಕೊಲೆಗಡುಕರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಇಷ್ಟೆಲ್ಲ ಪ್ರಕರಣಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಕೊಲೆಗಡುಕರನ್ನು ಗಲ್ಲಿಗೇರಿಸುವಂತಹ ಕಾನೂನು ಜಾರಿಗೆ ತರಬೇಕು. ಅಂದಾಗ ಮಾತ್ರ ಇಲ್ಲಿ ಮಹಿಳೆಯರ ರಕ್ಷಣೆ ಸಾಧ್ಯ ಎಂದು ಹೇಳಿದರು.ಗೌರವ ಕಾರ್ಯದರ್ಶಿ ರೇಣುಕಾ ಕಬಾಡಿ ಮಾತನಾಡಿ, ರಾಜ್ಯದಲ್ಲಿ ಯುವತಿಯರ ಮೇಲೆ ನಡೆಯುತ್ತಿರುವ ಇಂತಹ ದುಷ್ಕೃತ್ಯಗಳಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಕಾರ್ಯದರ್ಶಿ ಕೌಶಲ್ಯ ಬದಿ, ಮಹಾನಂದ ಪತ್ತಾರ್, ರೇಣುಕಾ ಕಲ್ಬುರ್ಗಿ, ಎಸ್.ಎಸ್.ಕೆ. ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ, ಪೂಜಾ ಬೇವೂರ್, ವಿಜಯಲಕ್ಷ್ಮಿ ಬಿರಾದಾರ, ಶಿಲ್ಪಾ ಯಲಮಲಿ, ಅರುಣಾ ಗುಂಡಗಟ್ಟಿ, ಶಾಂತಾಬಾಯಿ ಬಾಕಳೆ, ವಿನಾಯಕ ಕಾಟವಾ, ಅರುಣ ಹುಚ್ಚಯ್ಯ, ಸ್ನೇಹಲತಾ ಕಬಾಡಿ ಹಾಗೂ ಪದಾಧಿಕಾರಿಗಳು ಇದ್ದರು.ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳಿಗೆ ಚಾಕುವಿನಿಂದ ಇರಿದು ಫಯಾಜ್ ಎನ್ನುವ ವಿದ್ಯಾರ್ಥಿ ಕೊಲೆ ಮಾಡಿದ್ದ. ಅದಾಗಿ ಕೆಲವೇ ದಿನಗಳಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯ ಮನೆಗೆ ನುಗ್ಗಿದ್ದ ದುಷ್ಕರ್ಮಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.