ವಿದ್ಯಾರ್ಥಿನಿಯರ ವಸತಿನಿಲಯದಲ್ಲಿನ ಸಿಸಿ ಕ್ಯಾಮೆರಾಗಳು ಕಳೆದ ಒಂದು ತಿಂಗಳಿನಿಂದ ಕಾರ್ಯನಿರ್ವಹಿಸದಿರುವ ಮಾಹಿತಿ ಆತಂಕಕಾರಿ ಸಂಗತಿಯಾಗಿದೆ.
ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಡಾ. ವೀಣಾ ಹಾನಾಪೂರ ಅವರ ಸಂಶಯಾಸ್ಪದ ಸಾವಿನ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದು, ಸತ್ಯವನ್ನು ಮುಚ್ಚಿಹಾಕುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರನ್ನು ಮೃತ ವಿದ್ಯಾರ್ಥಿನಿಯ ಪಾಲಕರೊಂದಿಗೆ ಭೇಟಿ ಮಾಡಿ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿ ಮಾತನಾಡಿದರು.ವಿದ್ಯಾರ್ಥಿನಿಯರ ವಸತಿನಿಲಯದಲ್ಲಿನ ಸಿಸಿ ಕ್ಯಾಮೆರಾಗಳು ಕಳೆದ ಒಂದು ತಿಂಗಳಿನಿಂದ ಕಾರ್ಯನಿರ್ವಹಿಸದಿರುವ ಮಾಹಿತಿ ಆತಂಕಕಾರಿ ಸಂಗತಿಯಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆಯ ಹೊಣೆ ಹೊತ್ತಿರುವ ವಿಶ್ವವಿದ್ಯಾಲಯದ ಆಡಳಿತದ ಈ ನಿರ್ಲಕ್ಷ್ಯ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ವಿದ್ಯಾರ್ಥಿನಿಯ ಸಾವಿನಂತಹ ಗಂಭೀರ ಘಟನೆ ನಡೆದಿದ್ದರೂ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಸ್ಪಂದನೆ ಸಾರ್ವಜನಿಕರಲ್ಲಿ ಇನ್ನಷ್ಟು ಅನುಮಾನಗಳನ್ನು ಮೂಡಿಸಿದೆ. ಜವಾಬ್ದಾರಿಯುತ ಆಡಳಿತದಿಂದ ನಿರೀಕ್ಷಿಸುವ ಪಾರದರ್ಶಕತೆ ಮತ್ತು ಮಾನವೀಯತೆ ಇಲ್ಲಿ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.
ತನಿಖೆಯ ಮೇಲೆ ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡ ಇರಬಾರದು. ಅಗತ್ಯವಿದ್ದರೆ ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಿ, ಡಿಜಿಟಲ್ ಸಾಕ್ಷ್ಯಗಳು, ಮೊಬೈಲ್ ಕರೆ ವಿವರಗಳು, ಸಿಸಿ ಟಿವಿ ತಾಂತ್ರಿಕ ದಾಖಲೆಗಳು, ವಸತಿನಿಲಯದ ಹಾಜರಾತಿ ದಾಖಲೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪಾತ್ರವನ್ನು ವೈಜ್ಞಾನಿಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮಾತನಾಡಿ, ಹಾಸ್ಟೆಲಿನ ಸಿಸಿ ಟಿವಿ ವ್ಯವಸ್ಥೆ ಕಾರ್ಯನಿರ್ವಹಿಸದಿರುವುದು ಮೇಲ್ನೋಟಕ್ಕೆ ಗಂಭೀರ ಆಡಳಿತಾತ್ಮಕ ಲೋಪವಾಗಿದ್ದು, ಈ ಕುರಿತು ಪ್ರತ್ಯೇಕ ತನಿಖೆ ನಡೆಸಲಾಗುವುದು. ಅಲ್ಲದೆ, ಗೃಹ ಸಚಿವರನ್ನು ಭೇಟಿ ಮಾಡಿ ಯಾವುದೇ ಪ್ರಭಾವಕ್ಕೆ ಅವಕಾಶ ನೀಡದೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು ಎಂದರು.