ಸಾರಾಂಶ
ಬೆಂಗಳೂರು : ಶಿಕ್ಷಣ ತಜ್ಞ ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿ (ಕನ್ನಡ+ಇಂಗ್ಲಿಷ್) ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗುರುವಾರದಿಂದ ಎರಡು ದಿನಗಳ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನಾಕಾರರ ಗುರುವಾರ ಬೆಳಗ್ಗೆಯಿಂದಲೇ ಧರಣೆ ಆರಂಭಿಸಿದರು. ಈ ವೇಳೆ ಪ್ರತಿಭಟನಾಕಾರರು ಹಿಂದಿ ಭಾಷೆ ಹೇರಿಕೆ ವಿರುದ್ಧ ಘೋಷಣೆ ಕೂಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಅಹೋರಾತ್ರಿ ಧರಣೆ ಉದ್ದೇಶಿಸಿ ಮಾತನಾಡಿದ ನಾರಾಯಣಗೌಡ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ವ್ಯಾಪಕ ಬಳಕೆಯಾಗುತ್ತಿದೆ. ಆದರೆ, ಶಿಕ್ಷಣ ವ್ಯವಸ್ಥೆಯಲ್ಲಿ ತ್ರಿಭಾಷಾ ಸೂತ್ರದ (ಕನ್ನಡ, ಇಂಗ್ಲಿಷ್, ಹಿಂದಿ) ಹೆಸರಿನಲ್ಲಿ ಹಿಂದಿ ಹೇರಿಕೆ ಸಲ್ಲದು. ಇದು ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆ ಮೇಲೆ ಅನಗತ್ಯ ಒತ್ತಡ ತರಲಿದೆ. ಪಠ್ಯಕ್ರಮದಿಂದ ಕೈಬಿಡುವಂತೆ ಹಿಂದಿನಿಂದಲೂ ಹೋರಾಟ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ತಜ್ಞ ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ದ್ವಿಭಾಷಾ ಶಿಕ್ಷಣ ಜಾರಿಗೊಳಿಸಲು ತನ್ನ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಕರ್ನಾಟಕದ ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು (ಕನ್ನಡ /ಮಾತೃಭಾಷೆ + ಇಂಗ್ಲಿಷ್) ಅನುಷ್ಠಾನಗೊಳಿಸುವುದು, ರಾಜ್ಯದ ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವುದು, ಮುಖ್ಯವಾಗಿ ವರದಿಯಲ್ಲಿ ಮಾತೃಭಾಷೆ+ಕನ್ನಡ ಎರಡು ಇದ್ದು ಹಲವು ಗೊಂದಲವಿದೆ. ಈ ನಿಟ್ಟಿನಲ್ಲಿ ಸರ್ಕಾರ ವರದಿ ಪರಿಶೀಲಿಸಿ ಕನ್ನಡ+ಇಂಗ್ಲಿಷ್ ಜಾರಿಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
2024-25 ನೇ ಸಾಲಿನಲ್ಲಿ ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಶಾಲೆಗಳು ಕನ್ನಡವನ್ನು ಮೊದಲ ಅಥವಾ 2ನೇ ಭಾಷೆಯಾಗಿ ಕಲಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೂ ಕೆಲವು ಶಿಕ್ಷಣ ಸಂಸ್ಥೆಗಳು ಇದರ ವಿರುದ್ಧ ಕೋರ್ಟ್‌ಮೆಟ್ಟಿಲೇರಿವೆ. ಕನ್ನಡ ಕಲಿಸದ ಶಾಲೆಗಳ ಮಾನ್ಯತೆ ರದ್ದುಪಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಮುಖ್ಯವಾಗಿ ದ್ವಿಭಾಷಾ ನೀತಿ ಜಾರಿಗೊಳಿಸಲು ಅದಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಕನ್ನಡಪರ ಚಿಂತಕ ವೀರಕಪುತ್ರ ಶ್ರೀನಿವಾಸ್, ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣವೀರಪ್ಪ ಸೇರಿದಂತೆ ನೂರಾರು ಮಂದಿ ಪ್ರತಿಭಟನಾಕಾರರಿದ್ದರು.