16ರೊಳಗೆ ಒಳ ಮೀಸಲಾತಿ ಜಾರಿಗೆ ಆಗ್ರಹ

| Published : Aug 14 2025, 01:00 AM IST

ಸಾರಾಂಶ

ಭರವಸೆ ಈಡೇರದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡ ವಿ.ಟಿ.ವೆಂಕಟರಾಮಯ್ಯ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ತುರುವೇಕೆರೆ

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ರವರ ನೇತೃತ್ವದ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಒಳ ಮೀಸಲಾತಿಯನ್ನು ಇದೇ ತಿಂಗಳ 16 ರಂದು ಜಾರಿಗೊಳಿಸುವುದಾಗಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಈ ಭರವಸೆ ಈಡೇರದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡ ವಿ.ಟಿ.ವೆಂಕಟರಾಮಯ್ಯ ಎಚ್ಚರಿಸಿದ್ದಾರೆ.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಗೆ ಮುನ್ನ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಬಹು ವರ್ಷಗಳ ಕನಸು ನನಸಾಗುವ ದಿನ ಹತ್ತಿರ ಬರುತ್ತಿದೆ. ಸಂವಿಧಾನದತ್ತವಾಗಿ ನಮಗೆ ಸಿಗಬೇಕಿರುವ ಸೌಲಭ್ಯ ದೊರೆಯುತ್ತಿದೆ. ಆದರೆ ಇದನ್ನು ವಿನಾಕಾರಣ ಮುಂದೂಡಿದರೆ ಪರಿಸ್ಥಿತಿ ನೆಟ್ಟಗಿರದು. ಈ ಮಧ್ಯೆ ಮೈಸೂರಿನ ಛಲವಾದಿ ಮಹಾಸಭಾದ ಜ್ಞಾನ ಪ್ರಕಾಶ್ ಸ್ವಾಮೀಜಿ ಒಳಮೀಸಲಾತಿ ವರದಿಯು ಸಮರ್ಪಕವಾಗಿಲ್ಲವೆಂದು ಹೇಳಿರುವುದು ಖಂಡನೀಯ. ಈ ಹೇಳಿಕೆ ದಲಿತ ದಲಿತರ ನಡುವೆ ವೈಷಮ್ಯಕ್ಕೆ ಕಾರಣವಾಗಲಿದೆ. ಮಾದಿಗ, ಕೊರಚ, ಕೊರಮ, ಲಂಬಾಣಿ, ಬೋವಿ ಹೊಲಯ ಸಮುದಾಯಗಳಿಗೆ ಅನ್ಯಾಯವಾಗುವ ರೀತಿ ಹೇಳಿಕೆ ನೀಡಿರುವುದು ಅಕ್ಷ್ಯಮ್ಯವಾಗಿದೆ. ಅವರಿಗೆ ಮಾದಿಗ ಸಮುದಾಯ ಧಿಕ್ಕಾರ ಹೇಳಲಿದೆ ಎಂದರು. ಈ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ನಾಗಮೋಹನ್ ದಾಸ್ ರ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕೆಂದು ಅವರು ಮನವಿ ಮಾಡಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ಒಳಮೀಸಲಾತಿ ವರದಿಯ ಪ್ರಕಾರ ಎಡಗೈ (ಮಾದಿಗ) ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದೆ. ಆದರೆ ಜ್ಞಾನ ಪ್ರಕಾಶ್ ಸ್ವಾಮೀಜಿ ಸ್ವಜಾತಿ ಮೋಹದಿಂದ ಛಲವಾದಿ ಸಂಖ್ಯೆ ಹೆಚ್ಚು ಇದೆ ಎಂದು ಹೇಳುವ ಮೂಲಕ ಸರ್ಕಾರವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ. 16 ಕ್ಕೆ ಒಳಮೀಸಲಾತಿ ಪ್ರಕಟಿಸುವುದಾಗಿ ಹೇಳಿರುವುದು ಸ್ವಾಗತಾರ್ಹ ಎಂದರು. ವಿಷ ಉಚಿತವಾಗಿ ನೀಡಿ: ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ತಾಲೂಕು ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಆ 16 ರಂದು ಒಳ ಮೀಸಲಾತಿಯನ್ನು ಜಾರಿಗೊಳಿಸಲೇಬೇಕು. ತಪ್ಪಿದಲ್ಲಿ ಅವರು ಎಲ್ಲಾ ದಲಿತರಿಗೂ ಉಚಿತವಾಗಿ ವಿಷವನ್ನು ನೀಡುವ ಮೂಲಕ ದಲಿತರ ಭವಿಷ್ಯಕ್ಕೆ ಸಮಾಧಿ ಕಟ್ಟಲಿ ಎಂದು ಗುಡುಗಿದರು. ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಲ್ಲೂರು ತಿಮ್ಮೇಶ್, ಮುಖಂಡರುಗಳಾದ ಗುರುದತ್, ಬೋರಪ್ಪ, ಲಕ್ಷ್ಮೀದೇವಮ್ಮ, ಅಫ್ಜಲ್, ಮುನಿಯೂರು ಮಂಜು ಸೇರಿದಂತೆ ಅನೇಕರು ಇದ್ದರು.