ಸಾರಾಂಶ
ಈಡಿಗ ಸಮುದಾಯವನ್ನು ಪರಿಶಿಷ್ಟ ಪಂಗಡ ಸೇರ್ಪಡೆ ಮಾಡುವುದೂ ಸೇರಿ ವಿವಿಧ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಯಿತು. ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ನವೀನ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಈಡಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರು. ಅನುದಾನ ನೀಡಬೇಕೆಂದು ಆಗ್ರಹ.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಈಡಿಗ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ಹಣ ಬಳಸಿಕೊಂಡು, ತಕ್ಷಣವೇ ಸಮಾಜದ ಅಧ್ಯಯನ ಮಾಡಬೇಕು. ಈಡಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರು. ಅನುದಾನ ನೀಡಬೇಕು, ಸಮುದಾಯವನ್ನು ಪರಿಶಿಷ್ಟ ಪಂಗಡ ಸೇರ್ಪಡೆ ಮಾಡುವುದೂ ಸೇರಿ ವಿವಿಧ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲಾಯಿತುಅನಾದಿಯಿಂದಲೂ ಕುಲ ಕಸುಬನ್ನೇ ನೆಚ್ಚಿಕೊಂಡು ಬಂದ ಸಮುದಾಯ ಈಡಿಗರದ್ದು. ಸಮಾಜಕ್ಕೆ ಮರಳಿ ಕುಲ ಕಸುಬು ನೀಡಬೇಕು. ಕಸುಬನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನನ್ನು ಮಂಜೂರು ಮಾಡಿ ಜೀವನಕ್ಕೆ ಆಧಾರ ಕಲ್ಪಿಸಬೇಕು. ರಾಜ್ಯದಲ್ಲಿ ಈಡಿಗ ಸಮುದಾಯದ ನಿರ್ಗತಿಕರಿಗೆ ಮನೆ ಹಾಗೂ ನಿವೇಶನ ಮಂಜೂರು ಮಾಡಬೇಕು. ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ಪ್ರತಿಷ್ಟಾಪಿಸಬೇಕು ಎಂದು ಒತ್ತಾಯಿಸಿದರು.
ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಭೇಟಿ ನೀಡಿ ಅಹವಾಲು ಆಲಿಸಿದರು. ಈ ವೇಳೆ ಮಾತನಾಡಿದ ಅವರು, ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದ್ದು, ವಿಧಾನ ಪರಿಷತ್‍ನಲ್ಲಿ ಮಾತನಾಡುತ್ತೇನೆ. ಬೇಡಿಕೆಗಳ ಈಡೇರಿಸುವಲ್ಲಿ ಸರ್ಕಾರ ಮುಂದಾಗಬೇಕಿದೆ ಎಂದರು.ರಾಜ್ಯಕ್ಕೆ ಈಡಿಗ ಸಮುದಾಯ ಕೂಡುಗೆ ಬಹಳ ಇದೆ. ಈಡಿಗರು ಎಲ್ಲರ ಜೊತೆ ಸಹಬಾಳ್ವೆಯಿಂದ ಹೊಂದಿಕೊಂಡು ಇದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮುದಾಯ ಇದೆ. ಚಿತ್ರದುರ್ಗ, ಶಿವಮೊಗ್ಗ ಈಡಿಗ ಸಮುದಾಯ ಇದೆ. ಅನೇಕರಿಗೆ ಕುಲಕಸುಬನ್ನು ನಡೆಸಲು ಅವಕಾಶ ಇಲ್ಲದಂತಾಗಿದೆ. ಸಮುದಾಯದ ಯುವಕರು ಶಿಕ್ಷಣದಿಂದ ವಂಚಿತರಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಅಭಯ ನೀಡಿ ಸಮುದಾಯವನ್ನು ಶಕ್ತಿ ಮೀರಿ ಮೇಲೆತ್ತುವ ಕಾರ್ಯ ಮಾಡಬೇಕಿದೆ ಎಂದರು.
ಬಸವನಾಗಿದೇವ ಶ್ರೀಗಳು ಸೇರಿ ಈಡಿಗ ಸಮಾಜದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನು, ಜಿಲ್ಲಾ ಮಹಿಳಾ ಅಧ್ಯಕ್ಷ ಉಮಾದೇವಿ, ಜಿಲ್ಲಾ ಉಪಾಧ್ಯಕ್ಷ ರಮೇಶ್, ಮುಖಂಡರಾದ ಶ್ರೀನಿವಾಸ್, ಪ್ರಕಾಶ್ ಧರಣಿಯಲ್ಲಿ ಪಾಲ್ಗೊಂಡಿದ್ದರು.