ರೈಲ್ವೆ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಳಕ್ಕೆ ಆಗ್ರಹ

| Published : Sep 28 2024, 01:22 AM IST

ಸಾರಾಂಶ

೦೭೩೩೫/೩೬, ಬೆಳಗಾವಿ-ಹೊಸಪೇಟೆ-ಹೈದ್ರಾಬಾದ್-ಭದ್ರಾಚಲಂ ರೈಲು ಕೂಡಲೇ ಪುನರ್ ಆರಂಭಿಸಬೇಕು.

ಹೊಸಪೇಟೆ: ರೈಲ್ವೆ ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಶೀಘ್ರ ಕ್ರಮ ವಹಿಸುವಂತೆ ರೈಲ್ವೆ ಇಲಾಖೆಯ ವಾಣಿಜ್ಯ ನಿರೀಕ್ಷಕ ಶ್ರೀನಿವಾಸ್ ಮೆಟ್ಲಾ ಅವರನ್ನು ಆಗ್ರಹಿಸಲಾಯಿತು.ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ವಾಣಿಜ್ಯ ನಿರೀಕ್ಷಕ ಶ್ರೀನಿವಾಸ್ ಮೆಟ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈಲ್ವೇ ಪ್ರಯಾಣಿಕರಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವ ಕುರಿತ ಹಲವು ಬೇಡಿಕೆಗಳನ್ನು ರೈಲ್ವೇ ನಿಲ್ದಾಣ ಸಲಹಾ ಸಮಿತಿ ಸದಸ್ಯರು ಗಮನಕ್ಕೆ ತಂದರು.

ಕಳೆದ ೫-ತಿಂಗಳಿಂದ ರದ್ದಾಗಿರುವ ಗಾಡಿ ಸಂಖ್ಯೆ : ೦೭೩೩೫/೩೬, ಬೆಳಗಾವಿ-ಹೊಸಪೇಟೆ-ಹೈದ್ರಾಬಾದ್-ಭದ್ರಾಚಲಂ ರೈಲು ಕೂಡಲೇ ಪುನರ್ ಆರಂಭಿಸಬೇಕು. ಈ ರೈಲು ರದ್ದಾಗಿರುವುದರಿಂದ ಉತ್ತರ ಕರ್ನಾಟಕ ಹಾಗೂ ವಿಜಯನಗರ ಬಳ್ಳಾರಿ ಜಿಲ್ಲೆಗಳ ಪ್ರಯಾಣಿಕರ ಯಾತ್ರಾಸ್ಥಳವಾದ ಮಂತ್ರಾಲಯ-ಹೈದ್ರಾಬಾದ್ ಮತ್ತು ಭದ್ರಾದ್ರಿಗೆ ತೆರಳುವವರಿಗೆ ನೇರ ಸಂಪರ್ಕ ಕಡಿತಗೊಂಡಂತಾಗಿದೆ. ಕೂಡಲೇ ಈ ರೈಲನ್ನು ಪುನರ್ ಆರಂಭಕ್ಕೆ ಕ್ರಮ ವಹಿಸಬೇಕು. ಅಲ್ಲದೇ ಗಾಡಿ ಸಂಖ್ಯೆ ೧೬೫೯೧/೯೨, ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಹೊಸಪೇಟೆ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ಹೊಸಪೇಟೆ ನಡುವೆ ಹೋಗಿ ಬರಲು ಸಾಮಾನ್ಯ ಧರ್ಜೆ ಟಿಕೆಟ್ ಪಡೆದು ಕೆಲವು ನಿಗದಿತ ಸ್ಲೀಪರ್ ಕ್ಲಾಸ್ ಕೋಚ್‌ಗಳಲ್ಲಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿತ್ತು. ಈ ಸೌಲಭ್ಯ ಮುಂದುವರೆಸಬೇಕು. ಅದೇ ರೀತಿ ಗಾಡಿ ಸಂಖ್ಯೆ : ೧೭೨೨೫/೨೬ ಹುಬ್ಬಳ್ಳಿ-ವಿಜಯವಾಡ ಮತ್ತು ವಿಜಯವಾಡ-ಹುಬ್ಬಳ್ಳಿ ರೈಲಿನಲ್ಲಿಯೂ ಸಹ ಹೊಸಪೇಟೆ, ಬಳ್ಳಾರಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿಗದಿತ ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹೊಸಪೇಟೆ ಮಾರ್ಗವಾಗಿ ಸಂಚರಿಸುತ್ತಿರುವ ಗಾಡಿ ಸಂಖ್ಯೆ : ೦೭೬೫೭ ತಿರುಪತಿ-ಹುಬ್ಬಳ್ಳಿ ಹಾಗೂ ಗುಂತಕಲ್-ಹುಬ್ಬಳ್ಳಿ ಗಾಡಿ ಸಂಖ್ಯೆ : ೦೭೩೩೮ ಈ ಎರಡು ರೈಲುಗಳು ಪ್ರತಿನಿತ್ಯ ವಿಳಂಬವಾಗಿ ಸಂಚರಿಸುತ್ತಿದ್ದು, ಸರಿಯಾದ ಸಮಯಕ್ಕೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಕೆಲ ರೈಲುಗಳ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ದುರ್ನಾತ ಬೀರುತ್ತಿದ್ದು, ಸ್ವಚ್ಚತೆ ಕಾಪಾಡಬೇಕು. ನಿಲ್ದಾಣದ ಪಾರ್ಕಿಂಗ್ ಆವರಣದಲ್ಲಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಸುಸರ್ಜಿತ ಶೌಚಾಲಯ ನಿರ್ಮಿಸಬೇಕು ಎಂದು ಸಹ ಒತ್ತಾಯಿಸಿದರು.

ಸಮಿತಿ ಸದಸ್ಯರಾದ ಮಹೇಶ್ ಕುಡುತಿನಿ, ಪ್ರಭಾಕರ್ ವೈ.ಯಮುನೇಶ್, ರಾಮಕೃಷ್ಣ, ಶರಣಗೌಡ, ಕೌತಾಳ್ ವಿಶ್ವನಾಥ್, ಪೀರಾನ್ ಸಾಬ್, ಹಾಗೂ ನಿಲ್ದಾಣದ ಟಿಕೇಟ್ ಪರಿವೀಕ್ಷಕ ದೇವಯ್ಯ ಇತರರಿದ್ದರು.