ಗ್ರಾಮೀಣ ಅಭಿವೃದ್ಧಿ ನೆಲೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ

ಬಳ್ಳಾರಿ: ಗ್ರಾಪಂ ಸದಸ್ಯರಿಗೆ ಗೌರವಧನ ಹೆಚ್ಚಳ ಮಾಡಬೇಕು. ಗ್ರಾಪಂ ಅಧ್ಯಕ್ಷರಿಗೆ ಚೆಕ್ ಪವರ್ ಮರಳಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ "ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ " ವತಿಯಿಂದ ಜ. 8ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ಹಾಗೂ ಶ್ರೀಧರಗಡ್ಡೆ ಗ್ರಾಪಂ ಸದಸ್ಯೆ ಎಚ್.ಎಂ. ಹೇಮಾ ಮಂಜುನಾಥ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ನೆಲೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆಗ ಮಾತ್ರ ಪಂಚಾಯಿತಿ ವ್ಯವಸ್ಥೆ ಅಸ್ತಿತ್ವ ಉಳಿಯಲು ಸಾಧ್ಯವಾಗುತ್ತದೆ. ಈ ಹಿಂದೆ ನಡೆದ ರಾಜ್ಯಮಟ್ಟದ ಹೋರಾಟದಿಂದ ಕೆಲವು ಬೇಡಿಕೆಗಳು ಈಡೇರಿವೆ. ಆದರೆ, ಇದೀಗ ಅನೇಕ ಪ್ರಮುಖ ಬೇಡಿಕೆಗಳನ್ನಿಟ್ಟುಕೊಂಡು ಬೆಂಗಳೂರು ಚಲೋ ಹೋರಾಟಕ್ಕೆ ಕರೆ ನೀಡಲಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ಸುಮಾರು 1500ಕ್ಕೂ ಹೆಚ್ಚು ಗ್ರಾಪಂ ಸದಸ್ಯರು ಹಾಗೂ ರಾಜ್ಯದಿಂದ 15 ಸಾವಿರಕ್ಕೂ ಹೆಚ್ಚು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಚಳವಳಿ ಪ್ರದರ್ಶನ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಕೇರಳ ರಾಜ್ಯದ ಮಾದರಿಯಲ್ಲಿ ಪಂಚಾಯಿತಿ ಅಧ್ಯಕ್ಷರಿಗೆ ₹15 ಸಾವಿರ, ಉಪಾಧ್ಯಕ್ಷರಿಗೆ ₹12 ಸಾವಿರ ಹಾಗೂ ಸದಸ್ಯರಿಗೆ ₹10 ಸಾವಿರ ಮಾಸಿಕ ಗೌರವಧನ ನೀಡಬೇಕು. ಸದಸ್ಯರಿಗೆ ಸಭಾಭತ್ಯೆ ₹500 ಹೆಚ್ಚಿಸಿ ಆದೇಶ ಹೊರಡಿಸಬೇಕು. ಸದಸ್ಯರ ಅವಧಿ ಬಳಿಕ ಶಾಸಕರಿಗೆ ಸಿಗುವಂತೆ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸದಸ್ಯರಿಗೆ ಉಚಿತ ವಿಮೆ ನೀಡಬೇಕು. ಸ್ಥಳೀಯ ಗ್ರಾಮ ಆಡಳಿತದಲ್ಲಿ ಆರ್‌ಡಿಪಿಆರ್ ಅಧಿಕಾರಿಗಳ, ಜಿಪಂ ಸಿಇಒ, ತಾಪಂ ಇಒ, ಅವರ ಹಸ್ತಕ್ಷೇಪ ನಿಲ್ಲಿಸಬೇಕು. ಪಂಚಾಯಿತಿ ಸದಸ್ಯರ ಗೌರವಧನ ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಬೇಕು ಎಂಬುದು ಸೇರಿದಂತೆ 15 ಬೇಡಿಕೆಗಳನ್ನಿಟ್ಟುಕೊಂಡು ಚಳವಳಿಗೆ ಕರೆ ನೀಡಲಾಗಿದೆ ಎಂದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಏಳುಬೆಂಚೆ ಗ್ರಾಪಂ ಸದಸ್ಯ ಎ. ಶ್ರೀಧರ್ ಏಳುಬೆಂಚೆ, ಸಂಡೂರು ತಾಲೂಕು ಅಧ್ಯಕ್ಷ ಹಾಗೂ ಕೃಷ್ಣನಗರ ಕ್ಯಾಂಪ್‌ನ ಗ್ರಾಪಂ ಸದಸ್ಯ ರೆಡ್ಡಿ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.