ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಆಯೋಗದ ಶಿಫಾರಸಿನಂತೆ ಪ.ಜಾ.ಗಳಿಗೆ ಶೇ.೧೫ರಿಂದ ೧೭ಕ್ಕೆ ಹಾಗೂ ಪ.ಪಂಗಳಿಗೆ ಶೇ.೩ರಿಂದ ೭ಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ತೀರ್ಮಾನವನ್ನು ಕೇಂದ್ರ ಸರ್ಕಾರ ಅಂಗೀಕರಿಸಿ ಸಂವಿಧಾನದ ಶೆಡ್ಯೂಲ್ ೯ಕ್ಕೆ ಸೇರಿಸಬೇಕಾಗಿದೆ ಎಂದು ಒತ್ತಾಯಿಸಲಾಗಿದೆ. ಎಲ್ಲ ರಾಜಕೀಯ ಪಕ್ಷಗಳೂ ಈ ತೀರ್ಮಾನಕ್ಕೆ ಬೆಂಬಲ ಸೂಚಿಸಿರುವುದರಿಂದ ಕೇಂದ್ರವು ವಿಳಂಬ ಮಾಡದೇ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ವತಿಯಿಂದ ಡಿಸಿ ಕಚೇರಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಇದೇ ವೇಳೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್. ಆರ್‌. ನವೀನ್ ಕುಮಾರ್‌ ಮಾಧ್ಯಮದೊಂದಿಗೆ ಮಾತನಾಡಿ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಆಯೋಗದ ಶಿಫಾರಸಿನಂತೆ ಪ.ಜಾ.ಗಳಿಗೆ ಶೇ.೧೫ರಿಂದ ೧೭ಕ್ಕೆ ಹಾಗೂ ಪ.ಪಂಗಳಿಗೆ ಶೇ.೩ರಿಂದ ೭ಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ತೀರ್ಮಾನವನ್ನು ಕೇಂದ್ರ ಸರ್ಕಾರ ಅಂಗೀಕರಿಸಿ ಸಂವಿಧಾನದ ಶೆಡ್ಯೂಲ್ ೯ಕ್ಕೆ ಸೇರಿಸಬೇಕಾಗಿದೆ ಎಂದು ಒತ್ತಾಯಿಸಲಾಗಿದೆ. ಎಲ್ಲ ರಾಜಕೀಯ ಪಕ್ಷಗಳೂ ಈ ತೀರ್ಮಾನಕ್ಕೆ ಬೆಂಬಲ ಸೂಚಿಸಿರುವುದರಿಂದ ಕೇಂದ್ರವು ವಿಳಂಬ ಮಾಡದೇ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಪ.ಜಾ. ಮೀಸಲಾತಿಯೊಳಗಿನ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ, ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ದೇವಿಂದರ್‌ ಸಿಂಗ್ ವಿರುದ್ಧ ಪಂಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ, ಒಳ ಮೀಸಲಾತಿ ಜಾರಿಗೆ ಕಾನೂನು ಆಧಾರವಿದೆ ಎಂದು ಸಿಪಿಐಎಂ ಅಭಿಪ್ರಾಯಪಟ್ಟಿದೆ. ಉದ್ಯೋಗ ಕ್ಷೇತ್ರದಲ್ಲಿಯೂ ಮೀಸಲಾತಿ ಸದುಪಯೋಗವಾಗಬೇಕಾದರೆ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳು, ಬ್ಯಾಕ್‌ಲಾಗ್ ಹುದ್ದೆಗಳು ಯಾವುದೇ ಕಾರಣಕ್ಕೂ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಬಾರದು ಎಂದು ಒತ್ತಾಯಿಸಲಾಗಿದೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಖಾಯಂ ನೇಮಕಾತಿ ಕಡಿಮೆಯಾಗುತ್ತಿರುವುದರಿಂದ ಮೀಸಲಾತಿಯ ಅವಕಾಶಗಳು ಸೀಮಿತವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀತಿ ಜಾರಿಗೊಳಿಸುವ ಅಗತ್ಯವಿದ್ದು, ಉದಾರೀಕರಣ ಮತ್ತು ಖಾಸಗೀಕರಣದ ಹಿನ್ನೆಲೆ ಉದ್ಯೋಗಾವಕಾಶಗಳು ಹೆಚ್ಚಾಗಿ ಖಾಸಗಿ ವಲಯದಲ್ಲೇ ಸೃಷ್ಟಿಯಾಗುತ್ತಿವೆ ಎಂದು ಗಮನಕ್ಕೆ ತರಲಾಗಿದೆ. ಆದ್ದರಿಂದ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಸಾಧಿಸಲು ಖಾಸಗಿ ವಲಯದಲ್ಲೂ ಮೀಸಲಾತಿ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಇನ್ನು ಮೀಸಲಾತಿ ಪ್ರಮಾಣ ಶೇ. ೫೦ ಮಿತಿ ಕುರಿತ ಇಂದ್ರಾ ಸಹಾನಿ ತೀರ್ಪಿನ ಹಿನ್ನೆಲೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಮಿತಿ ಮೀರುವ ಅವಕಾಶವಿದೆ ಎಂದು ಉಲ್ಲೇಖಿಸಿ, ಜನಸಂಖ್ಯೆ ಆಧಾರಿತ ಮೀಸಲಾತಿ ನೀಡುವ ಅಗತ್ಯವಿದೆ ಎಂದು ತಿಳಿಸಿದೆ. ಇಡಬ್ಲ್ಯೂಎಸ್ ಕೋಟಾದಡಿ ಶೇ.೧೦ ಮೀಸಲಾತಿ ನೀಡಿರುವುದನ್ನೂ ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ಈ ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಬಜೆಟ್‌ನಲ್ಲಿ ಸಮರ್ಪಕ ಅನುದಾನ ಮೀಸಲಿಡಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳಿಗೆ ಜನಸಂಖ್ಯೆ ಆಧಾರಿತ ಹಣ ಹಂಚಿಕೆ ಮಾಡಬೇಕು ಹಾಗೂ ಅದನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸಬಾರದು ಎಂದರು.ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಧಮೇಶ್ ಇತರರು ಉಪಸ್ಥಿತರಿದ್ದರು.