ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಶಕಗಳಿಂದ ಸಮಸ್ಯೆ ನಡುವೆ ಜೀವನ ಸಾಗಿಸುತ್ತಿರುವ ಖಾಸಗಿ ಬಡಾವಣೆ ನಿವಾಸಿಗಳ ಕೂಗಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವುದನ್ನು ಖಂಡಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ನೇತೃತ್ವದಲ್ಲಿ ಜು.15 ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.ನಗರ ಹೊರ ವರ್ತುಲ ರಸ್ತೆಯಿಂದ ಪೂರ್ವ ಭಾಗದಲ್ಲಿರುವ 27 ಖಾಸಗಿ ಬಡಾವಣೆಗಳ ಸಂಘಟನೆಗಳು ಒಟ್ಟಾಗಿ ಸೇರಿ ರಚಿಸಲಾಗಿರುವ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಶನಿವಾರ ಮಾನಸಿನಗರ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಎಲ್ಲಾ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಸಹಮತ ಸೂಚಿಸಿದವು.
ಸಭೆಯ ಆರಂಭದಲ್ಲಿ ಪ್ರತಿ ಬಡಾವಣೆಯಿಂದ ಸಲಹೆ ಸ್ವೀಕರಿಸಲಾಯಿತು. ಈ ವೇಳೆ ಮಾತನಾಡಿದ ಹಲವು ಬಡಾವಣೆಗಳ ಸಂಘಟನೆಗಳ ಪ್ರಮುಖರು, ಪ್ರತಿ ಮನೆಗೆ ಒಬ್ಬರಂತೆ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಮಹಿಳೆಯರಿಂದ ಖಾಲಿ ಕೊಡಗಳ ಪ್ರದರ್ಶನ ಆಗಬೇಕು. ಆಯಾ ಬಡಾವಣೆಗಳ ಸಮೀಪವೇ ಪ್ರಮುಖ ರಸ್ತೆಯಲ್ಲಿ ಅಲ್ಲಲ್ಲಿ ರಸ್ತೆ ತಡೆ ಮಾಡುವುದು. ಪ್ರತಿಯೊಬ್ಬರು ತಮ್ಮೊಂದಿಗೆ ಕನಿಷ್ಠ ಇಬ್ಬರನ್ನು ಕರೆ ತರಬೇಕು. ಪ್ರತಿಭಟನೆ ವೇಳೆ ಭಿತ್ತಿಪತ್ರದ ಪ್ರದರ್ಶನ ಆಗಬೇಕು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬಡಾವಣೆಗಳಿಗೆ ಅಧಿಕಾರಿಗಳನ್ನು ಕರೆಸುವ ಕೆಲಸ ಆಗಬೇಕು ಎಂಬುದು ಸೇರಿದಂತೆ ಹಲವಾರು ಅಭಿಪ್ರಾಯ ಹಾಗೂ ಸಲಹೆಗಳು ಕೇಳಿಬಂದವು.ಒಕ್ಕೂಟದ ಅಡಿಯಲ್ಲಿರುವ ಪೂರ್ವ ವಲಯದ 27 ಬಡಾವಣೆಗಳಲ್ಲಿ, ರಸ್ತೆ, ಕುಡಿಯಲು ಕಾವೇರಿ ನೀರು, ಒಳಚರಂಡಿ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕಾಗಿ ಪ್ರಬಲವಾಗಿ ಒತ್ತಡ ಹೇರಬೇಕು ಎಂಬ ಸೂಚನೆ ಒಕ್ಕೂಟದ ಎಲ್ಲಾ ಸದಸ್ಯರಿಂದ ವ್ಯಕ್ತವಾಯಿತು.
ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆದ ಬಳಿಕ ಅಂತಿಮವಾಗಿ ಜು.15ರ ಬೆಳಗ್ಗೆ 9.30ಕ್ಕೆ ದೇವೇಗೌಡ ವೃತ್ತದ ಸಮೀಪವಿರುವ ಕೆಎಂಎಫ್ ಬಡಾವಣೆಯ ಉದ್ಯಾನವನದಲ್ಲಿ ಜಮಾಯಿಸಿ ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾದಲ್ಲಿ ತೆರಳಲು ನಿರ್ಧರಿಸಲಾಯಿತು.ಸವಾರಿ ಮಾಡುವ ಸರ್ಕಾರಿ ವ್ಯವಸ್ಥೆ:
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎ.ಎಂ. ಬಾಬು ಮಾತನಾಡಿ, ಲೇಔಟ್ ಡೆವಲಪರ್ ಗಳಿಂದ ಒಂದಷ್ಟು ಸಮಸ್ಯೆ ಸೃಷ್ಟಿಯಾದರೆ ಅಧಿಕಾರಿಗಳಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಇದರ ಕೆಟ್ಟ ಫಲ ಅನುಭವಿಸುತ್ತಿರುವವರು ಬಡಾವಣೆಯ ಜನ. ಮಕ್ಕಳಿಗೆ ನಾವು ಉತ್ತಮ ವಾತಾವರಣ ಬಿಟ್ಟುಕೊಡದಿದ್ದಲ್ಲಿ ಅವರು ನಮಗೆ ಶಾಪ ಹಾಕುತ್ತಾರೆ. ನಾವು ಮೌನವಾಗಿದ್ದಷ್ಟು ಸರ್ಕಾರಿ ವ್ಯವಸ್ಥೆ ನಮ್ಮ ಮೇಲೆ ಸವಾರಿ ಮಾಡುತ್ತದೆ. ನಾವು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.ನೀರಿನ ಮಲೀನತೆಯಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. 250 ಟಿಎಂಸಿ ನೀರು ಇದ್ದರೂ, ಕುಡಿಯುವ ನೀರಿಗಾಗಿ ಮೈಸೂರಿನ ಜನ ಪರದಾಡುವಂತಾಗಿದೆ. ವ್ಯವಸ್ಥಿತ ನೀರಿನ ಜಾಲ ಇಲ್ಲ. ಎಂಡಿಎ ಒಳಚರಂಡಿ ವ್ಯವಸ್ಥೆಯನ್ನು ಒಂದಕ್ಕೊಂದು ಲಿಂಕ್ ಮಾಡಿ, ಅದನ್ನು ಶುದ್ಧೀಕರಣ ಮಾಡಿ ಮರುಬಳಕೆ ಮಾಡುವ ಯೋಜನೆ ಮಾಡಿದಲ್ಲಿ ಸಮಸ್ಯೆ ಭಾಗಶಃ ನಿವಾರಣೆ ಆಗಲಿದೆ. ಈ ಮೂಲಕ ಮಲೀನಗೊಂಡಿರುವ ಕೆರೆ ಕಟ್ಟೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು ಎಂದು ಅವರು ಹೇಳಿದರು.
ಒಕ್ಕೂಟದ ಉಪಾಧ್ಯಕ್ಷ ಎಂ.ಎಚ್. ಚೆಲುವೇಗೌಡ, ಕಾರ್ಯದರ್ಶಿ ಎಲ್. ಪ್ರಕಾಶ್, ಸಹ ಕಾರ್ಯದರ್ಶಿ ಎಂ.ಎಲ್. ಅರುಣ್, ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ. ಕೃಷ್ಣೇಗೌಡ, ಖಜಾಂಚಿ ನರಸಿಂಹೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಭಟ್, ನಿರ್ದೇಶಕರು, 27 ಖಾಸಗಿ ಬಡಾವಣೆಗಳ ಸಂಘಟನೆಗಳ ಪದಾಧಿಕಾರಿಗಳು ಇದ್ದರು.