ಸಾರಾಂಶ
ದಾಬಸ್‌ಪೇಟೆ: ಗ್ರಾಮಕ್ಕೆ ನೀಡಿರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ಬಳಸಲು ಅನುಮತಿ ನೀಡಿರುವುದರಿಂದ ಹೆಚ್ಚು ಒತ್ತಡ ಆಗಿ ಪದೇಪದೇ ಟ್ರಾನ್ಸ್‌ಫಾರ್ಮರ್ ಸುಟ್ಟುಹೋಗುತ್ತಿದ್ದು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಗೊಟ್ಟಿಗೆರೆಪಾಳ್ಯಕ್ಕೆ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ಗ್ರಾಮಸ್ಥರು ಟ್ರಾನ್ಸ್‌ಫಾರ್ಮರ್ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಪಂ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಬೆಸ್ಕಾಂ ಅಧಿಕಾರಿಗಳಿಗೆ ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದರೂ ಹೊಸ ಟ್ರಾನ್ಸ್‌ಫಾರ್ಮರ್ ನೀಡುತ್ತಿಲ್ಲ. ಗ್ರಾಮದಲ್ಲಿ 25 ಕೆವಿ ಪ್ರಮಾಣದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು ಇದರಿಂದ ಇಡೀ ಗ್ರಾಮದಲ್ಲಿರುವ ಸುಮಾರು 70 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದೇ ಟ್ರಾನ್ಸ್‌ಫಾರ್ಮರ್‌ನಿಂದಲೇ ಕೈಗಾರಿಕೆಗಳಿಗೂ ಸಂಪರ್ಕ ನೀಡಿರುವ ಕಾರಣ ವಿದ್ಯುತ್ ಹೆಚ್ಚು ಬಳಕೆ ಆಗುತ್ತಿದೆ. ಆದ್ದರಿಂದ ಟ್ರಾನ್ಸ್‌ಫಾರ್ಮರ್ ಆಗಾಗ ಸುಟ್ಟು ಹೋಗುತ್ತಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ಮಾಜಿ ಸದಸ್ಯ ಸಿದ್ದಲಿಂಗಯ್ಯ ಮಾತನಾಡಿ, ಬೆಸ್ಕಾಂ ಅಧಿಕಾರಿಗಳು ಅಕ್ರಮವಾಗಿ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ನೀಡಿ ಅವರಿಂದ ಹಣ ಪಡೆದು ಸುಮ್ಮನಾಗುತ್ತಿದ್ದಾರೆ. ನಮಗೆ 60 ಕೆವಿ ವಿದ್ಯುತ್ ಸಾಮರ್ಥ್ಯದ ಟ್ರಾನ್ಸ್ ಫಾರ್ಮ್ ನ್ನು ಶೀಘ್ರವಾಗಿ ಅಳವಡಿಸಬೇಕು. ಇಲ್ಲದಿದ್ದರೆ ಬೆಸ್ಕಾಂ ಕಚೇರಿ ಮುಂದೆ ಗ್ರಾಮಸ್ಥರೆಲ್ಲರೂ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಲಲಿತಾ ಮಾತನಾಡಿ, ವಿದ್ಯುತ್ ವೋಲ್ಟೇಜ್ನಲ್ಲಿ ಏರುಪೇರುಗಳಾಗಿ ಮನೆಯಲ್ಲಿರುವ ಟಿವಿ, ಫ್ರಿಡ್ಜ್ ಇತರೆ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗುತ್ತಿವೆ. ಅಲ್ಲದೇ ಪದೇ ಪದೇ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗುವುದರಿಂದ ವಿದ್ಯುತ್ ಇಲ್ಲದೆ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯಾರ್ಥಿಗಳ ವ್ಯಾಸಂಗ, ಮತ್ತಿತರೆ ಕೆಲಸಗಳಿಗೆ ಅನನುಕೂಲವಾಗುತ್ತಿದೆ. ಈ ಹಿಂದೆ ಶಾಸಕರು ಗ್ರಾಮ ಪ್ರವಾಸಕ್ಕೆ ಬಂದಿದ್ದಾಗ ಸರಿಪಡಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದರೂ ಅಧಿಕಾರಿಗಳು ಮಾತ್ರ ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಲೈನ್ ಮ್ಯಾನ್ ವಿರುದ್ಧ ಆಕ್ರೋಶ:
ಲೈನ್ ಮ್ಯಾನ್ ಮುನಿರಾಜು ಗ್ರಾಮದ ಟ್ರಾನ್ಸ್ ಫಾರ್ಮರ್‌ನಿಂದ ಅಕ್ರಮವಾಗಿ ಕೈಗಾರಿಕೋದ್ಯಮಿಗಳ ಬಳಿ ಹಣ ಪಡೆದು ಸಂಪರ್ಕ ನೀಡುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಬಗ್ಗೆ, ಟ್ರಾನ್ಸ್ ಫಾರ್ಮರ್ ಬಗ್ಗೆ ಮಾಹಿತಿ ಕೇಳಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಕೋಟ್............
ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿರುವ ಬಗ್ಗೆ ಇದೀಗ ಮಾಹಿತಿ ಬಂದಿದೆ. ಇದುವರೆಗೂ ಈ ಕುರಿತು ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ಕೂಡಲೇ ಬೇರೆ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುತ್ತೇವೆ.-ನಾರಾಯಣಭೋವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ದಾಬಸ್‌ಪೇಟೆ ಬೆಸ್ಕಾಂ ಉಪವಿಭಾಗ
ಪೋಟೋ 3 :ಗೊಟ್ಟಿಗೆರೆಪಾಳ್ಯದ ಗ್ರಾಮಸ್ಥರು ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.