ಸಾರಾಂಶ
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮೆಕ್ಕೆಜೋಳ ಒಣಗಿಸುವ ಯಂತ್ರಗಳನ್ನು (ಡ್ರೈಯರ ಮಷಿನ್‌ಗಳನ್ನು) ಅಳವಡಿಸಬೇಕು ಎಂದು ಆಗ್ರಹಿಸಿ ಎಪಿಎಂಸಿ ವರ್ತಕರ ಸಂಘ ಸದಸ್ಯರು ಶುಕ್ರವಾರ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮೆಕ್ಕೆಜೋಳ ಒಣಗಿಸುವ ಯಂತ್ರಗಳನ್ನು (ಡ್ರೈಯರ ಮಷಿನ್‌ಗಳನ್ನು) ಅಳವಡಿಸಬೇಕು ಎಂದು ಆಗ್ರಹಿಸಿ ಎಪಿಎಂಸಿ ವರ್ತಕರ ಸಂಘ ಸದಸ್ಯರು ಶುಕ್ರವಾರ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಆವಕವಾಗುತ್ತಿದೆ. ರೈತರು ತಾವು ಬೆಳೆದ ಮೆಕ್ಕೆಜೋಳವನ್ನು ಮಾರಾಟ ಮಾಡಲು ನೇರವಾಗಿ ಎಪಿಎಂಸಿ ಅಂಗಡಿಗಳ ಪ್ರಾಂಗಣಗಳಿಗೆ ತಂದು ಇಲ್ಲಿಯೇ ಫಸಲನ್ನು ಒಣಗಿಸಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಅಕಾಲಿಕವಾಗಿ ಮಳೆ ಬಂದು ಒಣಗಿದ ಮೆಕ್ಕೆಜೋಳದ ಕಾಳುಗಳ ಮೇಲೆ ಬಿದ್ದು ಮತ್ತೆ ಹಸಿಯಾಗುವುದರಿಂದ ಅವುಗಳನ್ನು ಸರಿಯಾಗಿ ಒಣಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಅಧಿಕ ತೇವಾಂಶವಿರುವ ಮೆಕ್ಕೆಜೋಳಕ್ಕೆ ಬೆಲೆ ಸಿಗದೇ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ಸುಮಾರು ನಾಲ್ಕು ವರ್ಷಗಳ ಆವಕವನ್ನು ಗಮನಿಸಿದಾಗ 2021-22ರಲ್ಲಿ 490996 ಕ್ವಿಂಟಾಲ್, 2022-23 ರಲ್ಲಿ 485101 ಕ್ವಿಂಟಾಲ್ ಆವಕವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಆವಕವು ಪ್ರತಿ ವರ್ಷವೂ ಹೆಚ್ಚಾಗುತ್ತಿರುವುದರಿಂದ ರೈತರ ಅನುಕೂಲಕ್ಕಾಗಿ ಕೃಷಿ ಮಾರುಕಟ್ಟೆ ಸಮಿತಿಯವರು ಪ್ರಾಂಗಣಗಳಲ್ಲಿ ಗೋವಿನಜೋಳ ಒಣಗಿಸುವ ಯಂತ್ರಗಳನ್ನು (ಡ್ರೈಯರ ಮೆಷಿನ್‌ಗಳನ್ನು) ಸಮಿತಿಯ ವತಿಯಿಂದ ಅಳವಡಿಸಿದರೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತದೆ. ಕಾರಣ ಶಾಸಕರು ಆದಷ್ಟು ಬೇಗನೆ ಗೋವಿನಜೋಳ ಒಣಗಿಸುವ ಯಂತ್ರಗಳನ್ನು (ಡ್ರೈಯರ ಮೆಷಿನ್‌ಗಳನ್ನು) ಅಳವಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಉಪಾಧ್ಯಕ್ಷ ಎಂ.ಎಸ್. ಕಜ್ಜರಿ, ಕಾರ್ಯದರ್ಶಿ ಗುರುಪ್ರಕಾಶ ಜಂಬಗಿ, ರಾಜಣ್ಣ ಮೋಟಗಿ, ಸುಧೀರ ಕುರವತ್ತಿ, ಮಾಲತೇಶ ಕರಿಚಿಕ್ಕಪ್ಪನವರ, ಕಿರಣ ಅಂತರವಳ್ಳಿ, ಗುರುರಾಜ ಕಂಬಳಿ ಮತ್ತಿತರರಿದ್ದರು.