ವಿಮಾ ಪರಿಹಾರ ನೀಡಲು ಆಗ್ರಹ

| Published : Oct 31 2023, 01:15 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲಾ ರೈತ ಸಂಘ, ಶಿರಸಿ ತಾಲೂಕು ರೈತ ಸಂಘದ ವತಿಯಿಂದ ತಾಲೂಕಿನ ಕಬ್ಬೆ ಗ್ರಾಮದಲ್ಲಿ ರೈತರ ಸಭೆ ನಡೆಸಲಾಯಿತು. ಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ರೈತ ಮುಖಂಡರು ಕೃಷಿಕರ ಸಮಸ್ಯೆ ಆಲಿಸಿ, ಕೆಲವು ಸಲಹೆ ನೀಡಿದರು.

ಶಿರಸಿ: ಉತ್ತರ ಕನ್ನಡ ಜಿಲ್ಲಾ ರೈತ ಸಂಘ, ಶಿರಸಿ ತಾಲೂಕು ರೈತ ಸಂಘದ ವತಿಯಿಂದ ತಾಲೂಕಿನ ಕಬ್ಬೆ ಗ್ರಾಮದಲ್ಲಿ ರೈತರ ಸಭೆ ನಡೆಸಲಾಯಿತು.

ಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆರೆಯಪ್ಪ ನಾಯ್ಕ ಅವರು ರೈತ ಸಂಘವನ್ನು ರಚನೆ ಮಾಡಿರುವ ಕುರಿತು ರೈತರಿಗೆ ಮಾಹಿತಿ ನೀಡಿದರು. ರೈತ ಸಂಘದ ಮಹತ್ವ ಮನವರಿಕೆ ಮಾಡಿಕೊಟ್ಟರು. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಸರ್ಕಾರ ರೈತರಿಗೆ ಬರ ಪರಿಹಾರ ಹಾಗೂ ಬತ್ತ, ಅಡಕೆಯ ವಿಮಾ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ರೈತರು ವೈಜ್ಞಾನಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಿರಸಿ ತಾಲೂಕು ರೈತ ಸಂಘದ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ರೈತ ಸಂಘದೊಂದಿಗೆ ರೈತರು ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವ ಜತೆಗೆ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಮಾಧ್ಯಮ ವಕ್ತಾರ ಇಲಿಯಾಸ ಮಾತನಾಡಿ, ರೈತರು ಚಿಕ್ಕ ಪುಟ್ಟ ಆಸೆಗಾಗಿ ರಾಜಕೀಯ ಪಕ್ಷಗಳ ಜತೆ ಹೋಗುವುದನ್ನು ಬಿಟ್ಟು ರೈತ ಸಂಘದೊಂದಿಗೆ ಕೈಜೋಡಿಸಿ ರೈತ ಸಂಘ ಬಲಪಡಿಸಬೇಕು. ನ್ಯಾಯಕ್ಕಾಗಿ ಸದಾ ಹೋರಾಟ ನಡೆಸಬೇಕು ಎಂದರು. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗೀತಾ ಹೆಗಡೆ ಮಾತನಾಡಿದರು. ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಜಿ.ಬಿ. ನಾಯ್ಕ್, ಸುನಂದ ನಾಯ್ಕ್, ಎಸ್‌.ಎಫ್‌. ನಾಯ್ಕ, ಧೀರೇಂದ್ರ ಗೌಡ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸತ್ಯವತಿ ನಾಯ್ಕ್, ಚಂದ್ರಕಲಾ ನಾಯಕ್, ಶಿರಸಿ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ.ಎಂ. ಹಾಗೂ ಕಬ್ಬೆ ಗ್ರಾಮದ ರೈತ ಮುಖಂಡರಾದ ಮಾದೇವ ಅರ್ಲಹೊಂಡ ಉಪಸ್ಥಿತರಿದ್ದರು.