ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಮಧ್ಯಂತರ ಪರಿಹಾರ ನೀಡಲು ಆಗ್ರಹ

| Published : Jul 03 2025, 11:48 PM IST / Updated: Jul 03 2025, 11:49 PM IST

ಸಾರಾಂಶ

2024-25ರಲ್ಲಿ ಹಾವೇರಿ ಜಿಲ್ಲೆಯಲ್ಲಿ 129 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4 ಪ್ರಕರಣ ಪೆಂಡಿಂಗ್ ಇದ್ದು, 113 ಪ್ರಕರಣ ಸರ್ಕಾರ ಒಪ್ಪಿಕೊಂಡಿದೆ

ಹಾವೇರಿ: ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಸುರಿದ ಅತಿವೃಷ್ಠಿ ಮಳೆಯಿಂದ ಜಿಲ್ಲಾದ್ಯಂತ ಬಿತ್ತನೆ ಮಾಡಿದ ಬೆಳೆಗಳು ಹಳದಿ, ಕೊಳೆ ರೋಗಕ್ಕೆ ತುತ್ತಾಗಿವೆ. ಬಿತ್ತಿದ ಬೆಳೆ ನಂಬಿಕೊಂಡಿದ್ದ ರೈತರು ಬೆಳೆ ನಾಶಪಡಿಸಲು ಮುಂದಾಗಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಮಧ್ಯಂತರ ಪರಿಹಾರ ನೀಡಬೇಕೆಂದು ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಮುಂಗಾರು ಮತ್ತು ಪೂರ್ವ ಮುಂಗಾರಿನಲ್ಲಿ ಬಿದ್ದ ಮಳೆಯಿಂದ ಸಂತಸಗೊಂಡಿದ್ದ ರೈತರು ಮೆಕ್ಕೆಜೋಳ, ಸೋಯಾಬೀನ್, ಹತ್ತಿ, ಶೇಂಗಾ ಸೇರಿದಂತೆ ಹಲವು ಬೆಳೆ ಬೆಳೆಯಲು ಬಿತ್ತನೆ ಮಾಡಿದ್ದರು. ಆದರೆ ಮೇ, ಜೂನ್ ತಿಂಗಳಲ್ಲಿ ನಿರಂತರವಾಗಿ ಬಿದ್ದ ಅತಿವೃಷ್ಠಿ ಮಳೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಳದಿ, ಕೊಳೆ ರೋಗಕ್ಕೆ ತುತ್ತಾಗಿವೆ. ತಾಲೂಕಿನ ನೆಗಳೂರ ಜಿಪಂ ಕ್ಷೇತ್ರ ವ್ಯಾಪ್ತಿಯ ಹಂದಿಗನೂರು, ಕಿತ್ತೂರು, ಕೊರಡೂರು, ಮೇಲ್ಮುರಿ, ಹಾಲಗಿ, ಮರೋಳ, ಮರಡೂರ, ನೆಗಳೂರು, ಅಕ್ಕೂರು ಸೇರಿದಂತೆ ಸುತ್ತಮುತ್ತಲಿನ ಸುಮಾರು 19 ಗ್ರಾಮಗಳಲ್ಲಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಅನೇಕ ರೈತರು ಬೆಳೆಯನ್ನು ಟ್ರ್ಯಾಕ್ಟರ್‌, ಎತ್ತಿನ ಕುಂಟೆ ಮೂಲಕ ಹರಗುತ್ತಿದ್ದಾರೆ ಎಂದರು.

ನೆಗಳೂರ ಜಿಪಂ ಕ್ಷೇತ್ರ ವ್ಯಾಪ್ತಿಯ 19 ಹಳ್ಳಿಗಳಲ್ಲಿ 41,629 ಎಕರೆ ವಿಸ್ತೀರ್ಣ ಪ್ರದೇಶವಿದ್ದು, 34,365 ಎಕರೆ ಬಿತ್ತನೆ ಪ್ರದೇಶ ಲಭ್ಯವಿದೆ. ಈ ಪೈಕಿ 27,469 ಎಕರೆ ಬಿತ್ತನೆ ಮಾಡಲಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರ, ಕೂಲಿಗಾಗಿ ಎಕರೆಗೆ ₹10 ಸಾವಿರಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಸಾಲಸೋಲ ಮಾಡಿ ಬೀಜ, ಗೊಬ್ಬರಕ್ಕೆ ಮಾಡಿದ್ದ ಖರ್ಚು ನೀರು ಪಾಲಾಗಿದೆ. ಈ ಭಾಗದಲ್ಲಿ 13,000 ಎಕರೆ ಮೆಕ್ಕೆಜೋಳ, 200-300 ಎಕರೆ ಇತರೆ ಬೆಳೆ ಬೆಳೆದಿದ್ದು, ಸಂಪೂರ್ಣ ನಾಶವಾಗಿದೆ. ಮರುಬಿತ್ತನೆ ಮಾಡಲು ರೈತರ ಬಳಿ ದುಡ್ಡಿಲ್ಲದೇ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿ ಕೇವಲ ನೆಗಳೂರ ಜಿಪಂ ಅಷ್ಟೇಯಲ್ಲದೇ ಜಿಲ್ಲೆಯ 34 ಜಿಪಂ ಕ್ಷೇತ್ರದಲ್ಲೂ ಇದೆ. ಹಾಗಾಗಿ ರಾಜ್ಯ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹10 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಸಿ ಕೋರಿ, ಎನ್.ಕೆ ಮರೋಳ, ಮಹೇಶ ಅಂಗಡಿ, ಚನ್ನವೀರಪ್ಪ ಹಾವೇರಿಮಠ, ಪ್ರಭಣ್ಣ ಗೌರಿಮನಿ, ಗಿರೀಶ ಅಂಕಲಕೋಟಿ, ರವಿಕುಮಾರ ಸವಣೂರ, ಪ್ರಭು ಹಿಟ್ನಳ್ಳಿ, ರಾಜಶೇಖರ ಪಾಟೀಲ, ಪ್ರಹ್ಲಾದಗೌಡ ಪಾಟೀಲ, ಸಿ.ಎಸ್. ಏಕಬೋಟಿ, ಐ.ಜಿ. ಕೋರಿ ಇತರರು ಇದ್ದರು.

ಕಳಪೆ ಬೀಜ ಮಾರಾಟ ಜಾಲಕ್ಕೆ ಕಡಿವಾಣ ಹಾಕಿ: 2024-25ರಲ್ಲಿ ಹಾವೇರಿ ಜಿಲ್ಲೆಯಲ್ಲಿ 129 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4 ಪ್ರಕರಣ ಪೆಂಡಿಂಗ್ ಇದ್ದು, 113 ಪ್ರಕರಣ ಸರ್ಕಾರ ಒಪ್ಪಿಕೊಂಡಿದೆ. ಇನ್ನೂ 13 ಪ್ರಕರಣ ಇತ್ಯರ್ಥವಾಗಿಲ್ಲ. ರೈತರು ಆತ್ಮಹತ್ಯೆ ದಾರಿ ತುಳಿಯದಂತೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಸರ್ಕಾರ ಮಾಡಬೇಕು. ಅದಕ್ಕಾಗಿ ತಕ್ಷಣವೇ ರೈತರ ನೆರವಿಗೆ ಸರ್ಕಾರ ಬರಬೇಕು. ಜತೆಗೆ ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ, ಕಳಪೆ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಬೇಕು. ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.