ಸಾರಾಂಶ
ಹಾವೇರಿ: ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಶೇ. ೨೫ರಷ್ಟು ಮಧ್ಯಂತರ ಪರಿಹಾರ ನೀಡುವುದು ಹಾಗೂ ೨೦೨೩-೨೪ನೇ ಸಾಲಿನ ಬೆಳೆಹಾನಿ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ತಾಲೂಕು ಘಟಕದಿಂದ ನಗರದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಮುಖಂಡರು ಮಾತನಾಡಿ, ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಗೋವಿನ ಜೋಳ, ಹತ್ತಿ, ಸೋಯಾಬಿನ್, ಶೇಂಗಾ ಬೆಳೆಗಳು ಸಂಪೂರ್ಣ ಹಾಳಾಗಿದ್ದು ವಿಮಾ ಕಂತು ತುಂಬಿದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿರುವ ಮಾರ್ಗಸೂಚಿಯನ್ವಯ ಮಧ್ಯಂತರ ಪರಿಹಾರವಾಗಿ ಶೇ.೨೫ರಷ್ಟು ರೈತರ ಖಾತೆಗೆ ಜಮಾ ಮಾಡಬೇಕು. ೨೦೨೩-೨೪ನೇ ಸಾಲಿನಲ್ಲಿ ಬಹಳಷ್ಟು ರೈತರಿಗೆ ಬೆಳೆ ಹಾನಿ ಪರಿಹಾರ ಜಮೆ ಆಗಿಲ್ಲ. ಇದಕ್ಕಿರುವ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಿ ಅಂತಹ ರೈತರಿಗೆ ತಕ್ಷಣವೇ ಪರಿಹಾರ ನೀಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು. ಹಾವೇರಿ ನಗರದಲ್ಲಿ ಉತ್ತಮವಾಗಿರುವ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಗ್ಯಾಸ್ ಪೈಪ್‌ಲೈನ್ ಅಳವಡಿಸುತ್ತಿದ್ದು, ಈ ಗ್ಯಾಸ್ ಪೈಪ್ ಲೈನ್ ಅನ್ನು ನಿಗದಿತ ಆಳದಲ್ಲಿ ಅಳವಡಿಸುತ್ತಿಲ್ಲ. ಅಲ್ಲದೇ ಪೈಪ್‌ಲೈನ್ ಅಗೆದ ಸ್ಥಳವನ್ನು ಸರಿಯಾಗಿ ಮುಚ್ಚುತ್ತಿಲ್ಲ ಇದನ್ನು ಕೂಡಲೇ ಸರಿಪಡಿಸಬೇಕು, ಹಾಲಿನ ಹಣ ಮತ್ತು ಪ್ರೋತ್ಸಾಹಧನ ಹಣವನ್ನು ಕಳೆದ ೬-೭ ತಿಂಗಳಿಂದ ಸರಿಯಾಗಿ ರೈತರ ಖಾತೆಗೆ ಜಮಾ ಮಾಡಿಲ್ಲ. ಕೂಡಲೇ ಹಾಲು ಉತ್ಪಾದಕ ರೈತರಿಗೆ ಹಣ ಬಿಡುಗಡೆ ಮಾಡಬೇಕು. ಹಾವೇರಿ ಜಿಲ್ಲಾ ಹಾಲು ಒಕ್ಕೂಟಕ್ಕೆ ನೂರಾರು ಕೋಟಿ ಹಣ ಮಂಜೂರು ಆದರೂ ಮೇಗಾ ಡೇರಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ತ್ವರಿತವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕ ಎಂದು ಆಗ್ರಹಿಸಿದರು.೨೦೨೩-೨೪ ಸಾಲಿನಲ್ಲಿ ಬೆಳೆ ಕಟಾವು ಪ್ರಯೋಗದಲ್ಲಿ ಹೆಚ್ಚಿನ ಇಳುವರಿ ಹಾಕಲು ಮೂಲ ಕಾರ್ಯಕರ್ತರಿಗೆ ಒತ್ತಡ ಹಾಕಿ ರೈತರಿಗೆ ಬೆಳೆ ವಿಮೆ ವಂಚಿತರನ್ನಾಗಿ ಮಾಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ. ಆರ್.ಪಾಟೀಲ್ ಅವರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಅಕ್ರಮ-ಸಕ್ರಮ ಯೋಜನೆಯಡಿ ಕಳೆದ ೪ ವರ್ಷಗಳಿಂದ ಹಣ ತುಂಬಿದ ರೈತರಿಗೆ ಕಂಬ, ಟಿಸಿ, ವೈಯರ್ ಗಳನ್ನು ಇಲ್ಲಿಯವರೆಗೂ ಪೂರೈಸಿರುವುದಿಲ್ಲ ಕಾರಣ ಅತಿ ಶೀಘ್ರದಲ್ಲಿ ಹಣ ತುಂಬಿದ ರೈತರಿಗೆ ಕಂಬ, ಟಿಸಿ, ವೈಯರ್ ಪೂರೈಸಬೇಕು ಎಂದು ಒತ್ತಾಯಿಸಿದರು.ರೈತರಿಗೆ ಹೊಲಗದ್ದೆಗಳಿಗೆ ಓಡಾಡಲು ಕಾಯಂ ಬಂಡಿದಾರಿ ಮತ್ತು ಕಾಲುದಾರಿ ಕಲ್ಪಿಸಲು ಕಾನೂನಾತ್ಮಕವಾಗಿ ಶಾಶ್ವತ ಪರಿಹಾರ ಒದಗಿಸಬೇಕು, ಹಾವೇರಿ ತಾಲೂಕಿನ ನೀರಾವರಿ ಇಲಾಖೆಗೆ ಒಳಪಟ್ಟಿರುವ ಕೆರೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ತುಂಗಭದ್ರ, ವರದಾ ನದಿ ಮತ್ತು ತುಂಗಾ ಮೇಲ್ದಂಡೆ ಕಾಲುವೆ ಮುಖಾಂತರ ಕೆರೆಗಳಿಗೆ ನೀರು ತುಂಬಿಸಬೇಕು, ಬ್ಯಾಂಕಿನವರು ಬೆಳೆ ವಿಮೆ ಮತ್ತು ಬೆಳೆ ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮಾ ಮಾಡುತ್ತಿದ್ದು ಕೂಡಲೇ ರೈತರ ಉಳಿತಾಯ ಖಾತೆಗೆ ಜಮಾ ಮಾಡಬೇಕು. ಜಿಲ್ಲೆಯ ಬಹುದಿನದ ಬೇಡಿಕೆಯಾದ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ ಶರಣಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರೈತ ಮುಖಂಡರಾದ ದಿಳ್ಳೇಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ರಾಜು ತರ್ಲಗಟ್ಟ, ಈರಣ್ಣ ಚಕ್ರಸಾಲಿ, ಹೆಮಣ್ಣ ಬೂದಗಟ್ಟಿ, ಎಂ.ಎಂ.ಮದರಂಗಿ, ಸಿದ್ದಯ್ಯ ಚಿಕ್ಕಮಠ, ಗುಡ್ಡಪ್ಪ ಸೊಟ್ಟೆಪ್ಪನವರ, ರಾಕೇಶ ಸಜ್ಜನವರ, ಶಂಕ್ರಣ್ಣ ಪೂಜಾರ ಇತರರು ಇದ್ದರು.