ರಾಜು ತಾಂಡೇಲ ಸಾವಿನ ತನಿಖೆಗೆ ಆಗ್ರಹ

| Published : Sep 18 2024, 01:53 AM IST

ಸಾರಾಂಶ

ಗೋವಾದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರನ್ನು ತನಿಖೆಗೆ ಒಳಪಡಿಸಬೇಕು. ರಾಜು ತಾಂಡೇಲ ಕುಟುಂಬಕ್ಕೆ ₹10 ಕೋಟಿ ಪರಿಹಾರ ನೀಡಬೇಕು ಎಂದು ಡಿಸಿಯವರಿಗೆ ಮನವಿ ಸಲ್ಲಿಸಲಾಯಿತು.

ಕಾರವಾರ: ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರೂ, ಚಿತ್ತಾಕುಲ ಗ್ರಾಪಂ ಅಧ್ಯಕ್ಷರೂ ಆಗಿದ್ದ ರಾಜು ತಾಂಡೇಲ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಅವರನ್ನು ಜಿಲ್ಲಾಧಿಕಾರಿ ಮೂಲಕ ಸಂವಿಧಾನ ಉಳಿವಿಗಾಗಿ ಕರ್ನಾಟಕ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ಮನವಿ ನೀಡಿರುವ ಸಮಿತಿಯ ಪದಾಧಿಕಾರಿಗಳು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.ಕಾರವಾರ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜು ತಾಂಡೇಲ ಅವರನ್ನು ಗೋವಾಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಬರುವಾಗ ಅವರು ಮೃತಪಟ್ಟಿದ್ದರು. ಹಾಗಿದ್ದರೆ ಗೋವಾದಲ್ಲಿ ಏನಾಗಿದೆ, ಅಲ್ಲಿಂದ ಕಾರವಾರ ಬರುವ ತನಕ ಏನೇನಾಗಿದೆ ಎಂಬ ಬಗ್ಗೆ ಸಿಸಿ ಟಿವಿ ಪುಟೇಜ್‌ಗಳನ್ನು ಕಲೆಹಾಕಿ ಬಹಿರಂಗಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಗೋವಾದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರನ್ನು ತನಿಖೆಗೆ ಒಳಪಡಿಸಬೇಕು. ರಾಜು ತಾಂಡೇಲ ಕುಟುಂಬಕ್ಕೆ ₹10 ಕೋಟಿ ಪರಿಹಾರ ನೀಡಬೇಕು ಹಾಗೂ ಅವರ ಕುಟುಂಬದವರಿಗೆ ಉದ್ಯೋಗ ನೀಡಬೇಕು. ರಾಜು ತಾಂಡೇಲ ಸಾವಿನ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಿಬಿಐ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮಿತಿಯ ಜಿಲ್ಲಾ ಸಂಚಾಲಕ ಕೆ.ರಮೇಶ, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಉಮಾಕಾಂತ ಹರಿಕಂತ್ರ, ಅಂಕೋಲಾ ತಾಲೂಕು ಮೀನುಗಾರರ ಸಹಕಾರಿ ಸಂಘದ ಕಾರ್ಯದರ್ಶಿ ಶಾರದಾ ಹರಿಕಂತ್ರ, ಅಂಕೋಲಾ ತಾಲೂಕು ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷೆ ಮಂಗಲಾ ಪಾಂಡುರಂಗ ಹರಿಕಂತ್ರ, ವಿನಾಯಕ ಹರಿಕಂತ್ರ, ಮನವಿ ಸಲ್ಲಿಸಿದ್ದಾರೆ.