ಸಾರಾಂಶ
ಹಾವೇರಿ: ಹುಬ್ಬಳ್ಳಿಯ ಸರ್ಕಾರಿ ಡಿಪ್ಲೋಮ ಕಾಲೇಜಿನಲ್ಲಿ ಪ್ರಥಮ ವರ್ಷ ಅಭ್ಯಾಸ ಮಾಡುತ್ತಿದ್ದ ಜಿಲ್ಲೆಯ ಸವಣೂರ ತಾಲೂಕಿನ ನದಿನೀರಲಗಿ ಗ್ರಾಮದ ಮಂಜುಳಾ (ಬಿಂದು) ಪ್ರಕಾಶ ಹರಿಜನ ಶವ ಹಾವೇರಿ ಜಿಲ್ಲೆಯ ಅರಳಿಹಳ್ಳಿ ವರದಾ ನದಿಯಲ್ಲಿ ಪತ್ತೆಯಾಗಿದ್ದು, ಈಕೆಯ ಸಾವಿನ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಮಾದಿಗ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮಂಜುಳಾ(ಬಿಂದು) ಹರಿಜನ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದವಳಾಗಿದ್ದು, ಇವಳು ಹುಬ್ಬಳ್ಳಿಯ ಸರ್ಕಾರಿ ಡಿಪ್ಲೋಮ ಕಾಲೇಜಿನಲ್ಲಿ ಪ್ರಥಮ ವರ್ಷ ಅಭ್ಯಾಸ ಮಾಡುತ್ತಿದ್ದಳು. ಡಾ.ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಓದುತ್ತಿದ್ದ ಇವಳ ಶವ ನ.7ರಂದು ಅರಳಿಹಳ್ಳಿ ವರದಾ ನದಿಯಲ್ಲಿ ಪತ್ತೆಯಾಗಿತ್ತು. ಮಂಜುಳಾ ಹುಬ್ಬಳ್ಳಿಯಿಂದ ಇಲ್ಲಿಗೆ ಹೇಗೆ ಬಂದಳು? ಎನ್ನುವುದು ನಿಗೂಢವಾಗಿದೆ. ಮೇಲ್ನೋಟಕ್ಕೆ ಈಕೆಯ ಸಾವು ಅನುಮಾನಾಸ್ಪದ ಸಾವು ಎಂದು ಕಂಡು ಬರುತ್ತದೆ. ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಈ ಹಿಂದೆ ಕೆಲವು ಸಂಘನೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೆ ಯಾವುದೇ ತನಿಖೆ ಕೈಗೊಂಡಿರುವುದಿಲ್ಲ.ಅನುಮಾನಾಸ್ಪದವಾಗಿ ಮೃತಪಟ್ಟಿರುವ ವಿದ್ಯಾರ್ಥಿನಿ ಮಂಜುಳಾ ಪ್ರಕಾಶ ಹರಿಜನ ಸಾವಿನ ಬಗ್ಗೆ ತನಿಖೆ ನಡೆಸಲು ವಿಳಂಬ ಧೋರಣೆ ಸರಿಯಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಿ ಈ ಕೂಡಲೇ ತುರ್ತಾಗಿ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಿ ನ್ಯಾಯ ದೊರಕಿಸಿಕೊಡವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾದಿಗ ಸಮಾಜದ ಮುಖಂಡರಾದ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ, ನ್ಯಾಯವಾದಿ ನಾಗರಾಜ ಮಾಳಗಿ, ಪ್ರಮುಖರಾದ ಅಶೋಕ ಮರೆಣ್ಣನವರ, ಸುಭಾಸ್ ಬೆಂಗಳೂರ, ರಾಜು ಮಾದರ, ಫಕ್ಕೀರೇಶ ಕಾಳಿ, ಮಾರುತಿ ಬಣಕಾರ, ಮಾರುತಿ ಸೊಟ್ಟಪ್ಪನವರ ಸೇರಿದಂತೆ ನದಿ ನೀರಲಗಿ ಗ್ರಾಮದ ಅನೇಕರು ಇದ್ದರು.