ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಕುಟುಂಬಗಳಿಗೆ ಕನಿಷ್ಠ 5 ಕೋಟಿ ಪರಿಹಾರ ನೀಡಬೇಕು.

ಚಿಕ್ಕಬಳ್ಳಾಪುರ:

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿಮಂಗಳ ಅರಣ್ಯ ಬೀಟ್‌ನಲ್ಲಿ ಕಾಡಂಚಿನ ಗ್ರಾಮದ ಮೂವರು ರೈತರನ್ನು ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ದಲಿತ ರೈತ ಕಾರ್ಮಿಕ ಐಕ್ಯ ಹೋರಾಟ ವೇದಿಕೆ ನೇತೃತ್ವದಲ್ಲಿ ಸೋಮವಾರ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ವೇದಿಕೆಯ ಸಂಚಾಲಕ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೃತಪಟ್ಟ ಕುಟುಂಬಗಳಿಗೆ ಕನಿಷ್ಠ 5 ಕೋಟಿ ಪರಿಹಾರ ನೀಡಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರಕರಣ ದಾಖಲಿಸಿ, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.

ವೇದಿಕೆಯ ಮತ್ತೊಬ್ಬ ನಾಯಕ ಕೆ.ಸಿ.ರಾಜಕಾಂತ್ ಮಾತನಾಡಿ, ಘೋರ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಈ ಪ್ರಕರಣದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ದಲಿತ ರೈತ ಕಾರ್ಮಿಕ ಐಕ್ಯ ಹೋರಾಟ ವೇದಿಕೆಯ ಪರಮೇಶ್, ಬಿ.ಎನ್.ಮುನಿಕೃಷ್ಣಪ್ಪ, ಸಿ.ಜಿ.ಗಂಗಪ್ಪ, ಸಿದ್ದಗಂಗಪ್ಪ, ವೈ.ಶಂಕರ್, ವೆಂಕಟರವಣಪ್ಪ, ಶ್ರೀರಂಗಾಚಾರಿ, ರಾಜಶೇಖರಯ್ಯ, ಟಿ.ಮುನಿರಾಜು ಎಂ.ಎಸ್.ಆನಂದ್, ಮತ್ತಿತರರು ಇದ್ದರು.

ಸಿಕೆಬಿ-3 ನಗರದ ಅಂಬೇಡ್ಕರ್ ವೃತ್ತದಲ್ಲಿ ಹನೂರು ಎನ್‌ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಿ, ದಲಿತ ರೈತ ಕಾರ್ಮಿಕ ಐಕ್ಯ ಹೋರಾಟ ವೇದಿಕೆ ಪ್ರತಿಭಟನೆ ನಡೆಸಿತು.