ಕಾಗೋಡಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಒತ್ತಾಯಿಸಿ, ಪಹಣಿ ರದ್ದು ಖಂಡಿಸಿ ಪಾದಯಾತ್ರೆ

| Published : Aug 27 2024, 01:33 AM IST

ಕಾಗೋಡಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಒತ್ತಾಯಿಸಿ, ಪಹಣಿ ರದ್ದು ಖಂಡಿಸಿ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣಿ, ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಒತ್ತಾಯಿಸಿ ಮತ್ತು ಭದ್ರಾವತಿ ಯಡೇಹಳ್ಳಿಯ ೩೪ ಕುಟುಂಬದವರಿಗೆ ಮಂಜೂರಾದ ಜಮೀನಿನ ಪಹಣಿ ರದ್ದು ಮಾಡಿರುವುದನ್ನು ಖಂಡಿಸಿ, ರೈತರ ಜಮೀನಿನ ಬಗ್ಗೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಭಾನುವಾರ ಜಿಲ್ಲಾಧಿಕಾರಿ ಕಚೇರಿವರೆಗೂ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಒತ್ತಾಯಿಸಿ ಮತ್ತು ಯಡೇಹಳ್ಳಿ ಸರ್ವೇ ನಂ. ೬೬ರಲ್ಲಿ ೬೮ ಎಕರೆ ೧೯೬೦-೬೧ರಲ್ಲಿ ೩೪ ಕುಟುಂಬದವರಿಗೆ ಮಂಜೂರಾದ ಜಮೀನಿನ ಪಹಣಿ ರದ್ದು ಮಾಡಿರುವುದನ್ನು ಖಂಡಿಸಿ, ರೈತರ ಜಮೀನಿನ ಬಗ್ಗೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಜಿಲ್ಲಾಧಿಕಾರಿ ಕಚೇರಿವರೆಗೂ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ದೇಶದ ದಕ್ಷ ಮತ್ತು ಪ್ರಾಮಾಣಿಕ ಮುತ್ಸದ್ಧಿ ರಾಜಕಾರಣಿಗಳಾಗಿ ಹಲವು ಖಾತೆ ನಿಭಾಯಿಸಿದ ಸರಳ ಸಜ್ಜನಿಕೆ ಸಮಾಜವಾದಿ ನಾಯಕರು, ಕಾಗೋಡು ಸತ್ಯಾಗ್ರಹದ ರುವಾರಿಗಳು ಹಾಗೂ ೨೦೧೩ರಲ್ಲಿ ವಿಧಾನಸಭಾ ಅಧ್ಯಕ್ಷರಾಗಿ ದೇಶದಲ್ಲಿಯೇ ಕ್ರಾಂತಿಕಾರಿ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಾಗೋಡು ತಿಮ್ಮಪ್ಪರ ಸೇವೆ ಅಪಾರವಾಗಿದೆ. ಬಗರ್ ಹುಕುಂ ಮತ್ತು ಅರಣ್ಯ ವ್ಯಾಪ್ತಿ ರೈತರ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಸಂಬಂಧಿಸಿದ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ ಕ್ರಾಂತಿಕಾರಿ ಸ್ಪೀಕರ್ ತಿಮ್ಮಪ್ಪರವರು, ಲಕ್ಷಾಂತರ ಜನರಿಗೆ ಬಗರ್ ಹುಕುಂ ಜಮೀನು ಹಾಗೂ ೯೪ಸಿ, ೯೪ಸಿಸಿ ಕಾನೂನು ಜಾರಿಗೆ ತರಲು ಅವಿರತ ಶ್ರಮಪಟ್ಟಿರುವ ಪ್ರಜ್ಞಾವಂತ ರಾಜಕಾರಣಿ. ಇವರಿಗೆ ರಾಜ್ಯದ ಮುಖ್ಯಮಂತ್ರಿಗಳಾಗುವ ಎಲ್ಲಾ ಅರ್ಹತೆಗಳಿದ್ದರೂ ವಯೋಸಹಜ ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇವರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿ ಕೋರುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್. ಬಂಗಾರಪ್ಪರವರು ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಮತ್ತು ವರನಟ ಡಾ.ರಾಜ್‌ಕುಮಾರ್‌ಗೆ ನೀಡಿದ್ದು, ಇತ್ತೀಚೆಗೆ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಮತ್ತು ಡಾ.ಪುನೀತ್ ರಾಜ್ ಕುಮಾರ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೀಗ ಭಾರತದ ಅಪರೂಪದ ರಾಜಕಾರಣಿ ಕಾಗೋಡು ತಿಮ್ಮಪ್ಪರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಆ.೧೫ರ ಸ್ವಾತಂತ್ರೋತ್ಸವ ದಿನದಂದು ಶಿವಮೊಗ್ಗದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪಗೆ ಮನವಿ ಸಲ್ಲಿಸಲಾಗಿದೆ. ಸೆ.೧೦ರಂದು ತಿಮ್ಮಪ್ಪರಿಗೆ ೯೩ನೇ ವರ್ಷದ ಜನ್ಮ ದಿನಾಚರಣೆಯಂದು ರಾಜ್ಯ ಸರ್ಕಾರ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

ತಿಮ್ಮಪ್ಪರಿಗೆ ಯಾವುದೇ ವಿಶ್ವವಿದ್ಯಾನಿಲಯ ಇದುವರೆಗೂ ಡಾಕ್ಟರೇಟ್ ಪದವಿ ನೀಡದಿರುವುದು ದುರದೃಷ್ಟಕರ ಸಂಗತಿಯಾಗಿದೆ. ತಕ್ಷಣ ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳು ಇವರ ಬಗ್ಗೆ ಅಧ್ಯಯನ ನಡೆಸಿ ಪದವಿ ನೀಡಿದರೆ ಡಾಕ್ಟರೇಟ್ ಪದವಿಗೆ ಮಹತ್ವ ಬಂದಂತಾಗುತ್ತದೆ ಎಂದರು.

ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಸಾರ್ವಜನಿಕ ಸೇವೆ ಸಲ್ಲಿಸಿದ ಮಾನವೀಯ ಮೌಲ್ಯಗಳನ್ನು ರಾಜಕಾರಣದಲ್ಲಿ ಅಳವಡಿಸಿ ಸರಳ ಸಜ್ಜನಿಕೆಯಿಂದ ಬಡ ಜನರ ಸೇವೆ ಸಲ್ಲಿಸಿದ ಕಾಗೋಡರಿಗೆ ಗೌರವಿಸಲು ವಿಶ್ವ ಮಾನವ ಪ್ರಶಸ್ತಿಯನ್ನು ಅವರ ಜನ್ಮ ದಿನಾಚರಣೆ ಸೆ.೧೦ರಂದು ಅವರ ಸ್ವಗೃಹದಲ್ಲಿ ಪ್ರದಾನಿಸಲು ತೀರ್ಮಾನಿಸಲಾಗಿದೆ ಎಂದರು.

ಹೊಳೆಹೊನ್ನೂರು ಹೋಬಳಿ, ಡಿ.ಬಿ.ಹಳ್ಳಿ ಗ್ರಾಮಸ್ಥರ ಯಡೇಹಳ್ಳಿ ಸರ್ವೇ ನಂ.೬೬ರಲ್ಲಿ ೬೮ ಎಕರೆ ಕಂದಾಯ ಜಮೀನನ್ನು ೧೯೬೦-೬೧ರಲ್ಲಿ ಮಾಡಲಾಗಿದ್ದು, ಇತ್ತೀಚೆಗೆ ಅರಣ್ಯ ಇಲಾಖೆಯವರು ಇದು ಅರಣ್ಯ ಜಮೀನು ಎಂದು ಸಾಗುವಳಿ ಮಾಡಲು ಬಿಡದೆ ಸುಳ್ಳು ಪ್ರಕರಣ ದಾಖಲು ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಅಲ್ಲದೆ ಈಗಲೂ ಜಾಲ್ತಿಯಲ್ಲಿರುವ ಪಹಣಿ ಮ್ಯುಟೇಷನ್ ಸಾಗುವಳಿ ಪತ್ರವನ್ನು ಆ.೨೧ರಂದು ಏಕಾಏಕಿ ರದ್ದುಗೊಳಿಸಿರುವುದು ಕಂದಾಯ ಇಲಾಖೆಯು ಮಾಡಿರುವ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ೧೯೬೦-೬೧ರಲ್ಲಿ ಈ ಬಗ್ಗೆ ಕಂದಾಯ ಅಧಿಕಾರಿಗಳು ಜಮೀನು ಮಂಜೂರು ಮಾಡಿ ಏಕಾಏಕಿ ರದ್ದುಗೊಳಿಸಿರುವುದು ಬಡ ರೈತರಿಗೆ ಮಾಡಿರುವ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡೇಹಳ್ಳಿ ಸರ್ವೇ ನಂ.೬೬ರಲ್ಲಿ ೧೯೨೦ರಲ್ಲಿ ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರುರವರು ಕಂದಾಯ ಜಮೀನನ್ನು ಅರಣ್ಯಕ್ಕೆ ಸೇರಿಸಿರೆಂದು ಹಾಗು ಜಮೀನು ಇಲ್ಲದ ವಾರಸುದಾರರಿಗೆ ಪರ್ಯಾಯ ಜಮೀನು ನೀಡಿರೆಂದು ಮಾಡಿರುವ ಆದೇಶವನ್ನು ತಕ್ಷಣ ರದ್ದುಗೊಳಿಸಿ ರಾಜ್ಯ ಸರಕಾರ ೧೯೬೦-೬೧ರಲ್ಲಿದ್ದ ಸಾಗುವಳಿದಾರರಿಗೆ ಸಂಬಂಧಿಸಿದ ವಾರಸುದಾರರಿಗೆ ಜಮೀನು ಸಾಗುವಳಿ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ, ಸಂಚಾಲಕರಾದ ಪತ್ರೇಶ್, ಪ್ರಮುಖರಾದ ಯಲ್ಲಪ್ಪ, ತಿಮ್ಮೇಶ್, ಆಶಾ, ರಂಗನಾಥ್, ರಮ್ಯ, ರಾಜುಸ್ವಾಮಿ, ಶೋಭಾ, ಸಂಗಮ್ಮ, ಆಂಜನಪ್ಪ, ರಂಗಮ್ಮ, ಮಂಜಮ್ಮ, ಪವಿತ್ರ, ರುದ್ರೇಶಪ್ಪ, ಎಸ್. ಈರೇಶ್, ಚಂದ್ರಮ್ಮ, ಸುಚೇಂದ್ರಪ್ಪ, ಮಾರುತಿ, ಸಂಗಪ್ಪ, ಚಂದ್ರಕಲಾ, ಜೆ. ಶ್ವೇತ ಸೇರಿದಂತೆ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

-------------

ರಾಜಕಾರಣಿ, ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಒತ್ತಾಯಿಸಿ ಮತ್ತು ಭದ್ರಾವತಿ ಯಡೇಹಳ್ಳಿಯ ೩೪ ಕುಟುಂಬದವರಿಗೆ ಮಂಜೂರಾದ ಜಮೀನಿನ ಪಹಣಿ ರದ್ದು ಮಾಡಿರುವುದನ್ನು ಖಂಡಿಸಿ, ರೈತರ ಜಮೀನಿನ ಬಗ್ಗೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಭಾನುವಾರ ಜಿಲ್ಲಾಧಿಕಾರಿ ಕಚೇರಿವರೆಗೂ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.