ರಾಮನಗರ: ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ನನ್ನನ್ನು ಚಾರಿತ್ರ್ಯ ವಧೆ ಮಾಡುತ್ತಿರುವ ನಗರಸಭೆ ಸದಸ್ಯ ಅಜ್ಮತ್ ಉಲ್ಲಾ ಖಾನ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆ ತಬಸ್ಸುಂ ಸುಲ್ತಾನಾ ಪೊಲೀಸರನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕೂಲಿ ಕೆಲಸ ಮಾಡುವವರು. ಓದು ಬರಹ ಗೊತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಅಜ್ಮತ್ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರೂ ಮಾನ ಮರ್ಯಾದೆಗೆ ಅಂಜಿ ಮೌನವಾಗಿದ್ದೆ. ಈಗ ನಮ್ಮದಲ್ಲದ ತಪ್ಪಿಗೆ ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ನಾನು ಪ್ರತಿನಿತ್ಯ ಪಿಲೇಚರಿ ಕೆಲಸಕ್ಕೆಂದು ರೆಹಮಾನಿಯ ನಗರದ ಜನತಾ ಕಾಲೋನಿಗೆ ಹೋಗುತ್ತೇನೆ. ನನ್ನನ್ನು ಹಿಂಬಾಲಿಸುವ ಅಜ್ಮತ್, ಮೊಬೈಲ್ ನಂಬರ್ ಕೊಟ್ಟು ಪೋನ್ ಮಾಡುವಂತೆ ಪೀಡಿಸುತ್ತಿದ್ದನು. ಅಲ್ಲದೆ, ಹಣದ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇದೆಲ್ಲವನ್ನು ನೋಡುತ್ತಿದ್ದ ಜನರು ಕೂಡ ಅಜ್ಮತ್ ರೌಡಿಸಂಗೆ ಹೆದರಿ ಸಾಕ್ಷಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಅಜ್ಮತ್‌ನಿಂದ ನನಗೆ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ನನ್ನ ಸಹೋದರನಿಗೆ ತಿಳಿಸಿದೆ. ಮನೆಯಲ್ಲಿ ಸಹೋದರಿಯರಿಗೆ ತೊಂದರೆಯಾಗುತ್ತಿರುವ ವಿಚಾರ ಬಂದಾಗ ಸಹೋದರರು ಆಕ್ರೋಶಗೊಳ್ಳುವುದು ಸಹಜ. ಅದೇ ರೀತಿ ನನ್ನ ಸಹೋದರ ಕೂಡ ಆಕ್ರೋಶದಲ್ಲಿ ಅಜ್ಮತ್ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವಿಚಾರ ನನಗೆ ತಡವಾಗಿ ಗೊತ್ತಾಯಿತು. ಮೊದಲೇ ತಿಳಿದಿದ್ದರೆ ಅಂತಹ ದುಷ್ಕೃತ್ಯಕ್ಕೆ ಅವಕಾಶವೇ ನೀಡುತ್ತಿರಲಿಲ್ಲ ಎಂದು ತಿಳಿಸಿದರು.

ಈಗ ನನ್ನ ಸಹೋದರನ ವಿರುದ್ಧವೂ ಪ್ರಕರಣ ದಾಖಲಾಗಿದೆ. ನಾನು ಕೂಡ ಅಜ್ಮತ್ ಉಲ್ಲಾ ಖಾನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದೇನೆ. ಪೊಲೀಸರು ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಹಾಗೊಂದು ವೇಳೆ ನ್ಯಾಯ ಸಿಗದಿದ್ದರೆ ಹೋರಾಟದ ಹಾದಿ ಹಿಡಿಯುವುದಾಗಿ ಸಂತ್ರಸ್ತೆ ತಬಸ್ಸುಂ ಸುಲ್ತಾನಾ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತೆ ಸಹೋದರಿ ಇದ್ದರು.

4ಕೆಆರ್ ಎಂಎನ್ 4.ಜೆಪಿಜಿ

ಸಂತ್ರಸ್ತೆ ತಬಸ್ಸುಂ ಸುಲ್ತಾನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.