ವಿಜಯಪುರ : ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ವಕೀಲ ಸೈಯದ್ ಆಸೀಫ್ ಉಲ್ಲಾ ಸೈಯದ್ ಖಾದರ್‌ ಭಾಷಾ ಖಾದ್ರಿ ಮೇಲೆ ಕೇಸ್ ದಾಖಲಿಸಿ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಹಿಂದೂ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ವಕೀಲ ಸೈಯದ್ ಆಸೀಫ್ ಉಲ್ಲಾ ಸೈಯದ್ ಖಾದರ್‌ ಭಾಷಾ ಖಾದ್ರಿ ಮೇಲೆ ಕೇಸ್ ದಾಖಲಿಸಿ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಹಿಂದೂ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿಜಯಪುರದ ವಕೀಲ ಸೈಯದ್ ಆಸೀಫ್ ಉಲ್ಲಾ ಸೈಯದ್ ಖಾದರ್ ಭಾಷಾ ಖಾದ್ರಿ ಎಂಬಾತನ ವಿರುದ್ಧ ದಲಿತ ಮಹಿಳೆ ಮೇಲೆ ಹಲ್ಲೆ ಹಾಗೂ ಕಿರುಕುಳ, ಕೋರ್ಟ್‌ ಆವರಣದಲ್ಲಿಯೇ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ, ಮಹಾನಗರ ಪಾಲಿಕೆ ಸದಸ್ಯೆಯ ಪತಿಯ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್‌ ಓಪನ್‌ ಮಾಡಿ ಗಡಿಪಾರು ಶಿಕ್ಷೆಗೆ ಗುರಿಯಾಗಿದ್ದ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಹತ್ತಾರು ಆರೋಪ ಎದುರಿಸುತ್ತಿರುವ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹಾಗೂ ಈ ಹಿಂದೆ ಜಿಲ್ಲಾ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವಾಚ್ಯ ಪದಗಳನ್ನು ಬಳಸಿದ್ದಾನೆ. ಅಮಾಯಕರಿಗೆ ಬಂದೂಕು ತೋರಿಸಿ ಹೆದರಿಸುತ್ತಿದ್ದಾನೆ.

ಸರ್ಕಾರಿ ವಕೀಲ ಎಂಬ ಪರಿಜ್ಞಾನ ಇಲ್ಲದೆ, ಅನೇಕ ಬಾರಿ ಸುದ್ದಿಗೋಷ್ಠಿ ನಡೆಸಿ, ಜನಪ್ರತಿನಿಧಿಯಾದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅವರಿಗೆ ಅವಾಚ್ಯ ಪದ ಬಳಸಿ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಎಲ್ಲ ಭಾಗಗಳಿಂದ ಹಿಂದೂ ಕಾರ್ಯಕರ್ತರು ಸೇರಿ ಬೃಹತ್‌ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಧರ್ಮಗಳ ಮಧ್ಯೆ ಜಗಳ ಹಚ್ಚಲು ಯತ್ನಿಸುತ್ತಿರುವ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ, ಏಕವಚನದಲ್ಲಿ ಸಂಭೋಧಿಸುವ ಮೂಲಕ ಅವರ ಹಕ್ಕಿಗೆ ಚ್ಯುತಿ ತಂದಿರುವ, ವಕೀಲ ಸೈಯದ್ ಆಸೀಫ್ ಉಲ್ಲಾ ಸೈದ್ ಖಾದರ್‌ ಭಾಷಾ ಖಾದ್ರಿ ಮೇಲೆ ಶೀಘ್ರ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಯುವ ಮುಖಂಡರಾದ ಸಂತೋಷ ಕವಟೆಕರ, ವಿಜಯ ಚವ್ಹಾಣ ಇದ್ದರು.

ಗಡಿಪಾರು ಮಾಡಲು ಆಗ್ರಹ: ಇಲ್ಲಿಯವರೆಗೆ ನಾವು ಅಭಿಮಾನಿಗಳಿಗೆ ತಾಳ್ಮೆಯಿಂದ ಇರಲು ವಿನಂತಿಸಿದ್ದು, ಈಗ ಮತ್ತೆ ತನ್ನ ಕೀಳುಮಟ್ಟದ ಪದ ಉಪಯೋಗಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮಾತಾಡಿರುವುದು ಎಲ್ಲ ಕಡೆ ವೈರಲ್ ಆಗಿದೆ. ರಾಜ್ಯದೆಲ್ಲಡೆಯಿಂದ ಬಸನಗೌಡ ಪಾಟೀಲ ಯತ್ನಾಳರ ಬೆಂಬಲಿಗರು, ಅಭಿಮಾನಿಗಳು, ಸಮಾಜದ ಮುಖಂಡರು ಖಾದ್ರಿ ಮನೆ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಿದ್ದು, ಅಹಿತಕರ ಘಟನೆಗಳು ನಡೆಯುವುದಕ್ಕೂ ಮುನ್ನ ಈತನನ್ನು ಬಂಧಿಸಿ, ಕೇಸ್ ದಾಖಲಿಸಿಕೊಂಡು, ಜಿಲ್ಲೆಯಿಂದ ಗಡಿಪಾರು ಮಾಡಬೇಕು ಹಾಗೂ ಬಂದೂಕು ಪರವಾನಗಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.