ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

| Published : Sep 25 2024, 01:00 AM IST

ಸಾರಾಂಶ

ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒಕ್ಕಲಿಗ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಒಕ್ಕಲಿಗ ಹಾಗೂ ದಲಿತ ಹೆಣ್ಣುಮಕ್ಕಳ ಬಗ್ಗೆ ಆಶ್ಲೀಲವಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಮುನಿರತ್ನ ಅವರು ಅತ್ಯಾಚಾರಿ ಹಾಗೂ ಹನಿಟ್ರ್ಯಾಪ್‍ನ ರೂವಾರಿಯಾಗಿದ್ದಾರೆ. ಗುತ್ತಿಗೆದಾರರನ್ನು ಶೋಷಣೆ ಮಾಡಿ ಹಣ ವಸೂಲಿ ಮಾಡಿದ್ದಾರೆ. ಗುತ್ತಿಗೆದಾರರ ಸಂಭಾಷಣೆಯ ಜೊತೆಯಲ್ಲಿ ಹೆಣ್ಣು ಮಕ್ಕಳ ವಿಷಯವಾಗಿ ಒಕ್ಕಲಿಗ ಹಾಗೂ ಪರಿಶಿಷ್ಟರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ.

ಒಕ್ಕಲಿಗ ಜನಾಂಗ ಈ ನಾಡಿಗೆ ರಾಜಕೀಯವಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಪಾರ ಕೊಡುಗೆ ನೀಡಿದ್ದು, ಇಂತಹ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಇಡೀ ಒಕ್ಕಲಿಗ ಸಮಾಜಕ್ಕೆ ನೋವುಂಟು ಮಾಡಿದೆ. ಇವರನ್ನು ಗೆಲ್ಲಿಸಿದ ರಾಜ ರಾಜೇಶ್ವರಿ ಕ್ಷೇತ್ರದ ಜನ ತಲೆತಗ್ಗಿಸುವಂತಾಗಿದ್ದು, ಈ ಕೂಡಲೇ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿದ್ದು, ಕೂಡಲೇ ಕಠಿಣ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಅಧ್ಯಕ್ಷ ಚೇತನ್‍ಗೌಡ, ರಮೇಶ್‍ಹೆಗ್ಡೆ, ರಘುಗೌಡ, ಮೋಹನ್, ಹರ್ಷಿತ್, ಸತೀಶ್, ವಿಜಯ್, ಯಮುನಾ ರಂಗೇಗೌಡ, ಎಸ್.ಟಿ. ಚಂದ್ರಶೇಖರ್, ತಮ್ಮಯ್ಯ, ಬಸವರಾಜ್, ದಿವಾಕರ್, ಕಿರಣ್ ಮತ್ತಿತರರು ಇದ್ದರು.