ಸಾರಾಂಶ
ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡರ ಬಣ) ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಬೆಳಗಾವಿಯ ಎಂಇಎಸ್ ಪುಂಡರು ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದನ್ನು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ) ತಾಲೂಕು ಅಧ್ಯಕ್ಷ ನಗರಂಗೆರೆ ಎಚ್.ಬಾಬು ತೀವ್ರವಾಗಿ ಖಂಡಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ರಾಜ್ಯ ಸರ್ಕಾರ ಹಲ್ಲೆ ನಡೆಸಿದ ಎಂಇಎಸ್‌ನ ಪುಂಡರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಕಳೆದ ಹಲವಾರು ವರ್ಷಗಳಿಂದ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗಲಾಟೆ ಸಾಮಾನ್ಯವಾಗಿದೆ. ಅನಗತ್ಯವಾಗಿ ವಿವಾದವನ್ನು ಎಬ್ಬಿಸಿ ಕನ್ನಡಿಗರ ಶಾಂತಿ, ತಾಳ್ಮೆ ಪರೀಕ್ಷೆ ಮಾಡುತ್ತಿದ್ದು ಸರ್ಕಾರ ಇವರ ಮೇಲೆ ಬೀಗಿ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಸರ್ಕಾರ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು.
ಬೆಳಗಾವಿ ಗಡಿಯಲ್ಲಿ ಕನ್ನಡಿಗರ ಮೇಲೆ ಪದೇಪದೇ ಹಲ್ಲೆ, ದೌರ್ಜನ್ಯ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರದ್ದುಪಡಿಸಬೇಕು. ಕನ್ನಡದಲ್ಲಿ ಮಾತನಾಡಿರುವ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಮರಾಠಿ ಪುಂಡರನ್ನು ಕೂಡಲೇ ಬಂಧಿಸಬೇಕು. ದುರುದ್ದೇಶವಾಗಿ ಕಂಡಕ್ಟರ್ ಮೇಲೆ ಪೋಕ್ಸೋ ಕಾಯಿದೆ ದಾಖಲು ಮಾಡಿರುವುದು ರದ್ದುಪಡಿಸಬೇಕು ಎಂದರು.ತಹಸೀಲ್ದಾರ್ ಪರವಾಗಿ ಮನವಿ ಸ್ವೀಕರಿಸಿದ ಶಿರಸ್ಥೇದಾರ್ ಸದಾಶಿವಪ್ಪ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಕಳಿಸುವ ಭರವಸೆ ನೀಡಿದರು.
ಈ ವೇಳೆ ಪಗಡಲಬಂಡೆ ನಾಗೇಂದ್ರಪ್ಪ, ಮೂಡಲ ಗಿರಿಯಪ್ಪ, ಮಂಜುನಾಥ, ಸತೀಶ್, ವೀರೇಂದ್ರ, ಶಂಕರ್, ನಾಗರಾಜು, ಜ್ಯೋತಿಲಕ್ಷ್ಮೀ, ಅನು, ಮಂಜಮ್ಮ ಮುಂತಾದವರು ಉಪಸ್ಥಿತರಿದ್ದರು.