ಇತ್ತೀಚೆಗೆ ಸಂಸದರು ಹೊನ್ನಾವರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲೂ ಸ್ಥಳೀಯ ಜನರು ನೇತ್ರಾವತಿ ಎಕ್ಸ್‌ಪ್ರೆಸ್(ಮಂಗಳೂರು- ಮುಂಬೈ) ರೈಲು ನಿಲುಗಡೆಯ ಬಗ್ಗೆ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಪ್ರಸಾದ್ ನಗರೆ
ಹೊನ್ನಾವರ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ ಎಂಬ ಕೊರಗಿನ ಕಥೆ ದಶಕಗಳಿಂದ ಕೇಳುತ್ತಲೆ ಇದ್ದೇವೆ. ಅದರಲ್ಲೂ ತಾಲೂಕಿನ ಜನರು ಅನಾರೋಗ್ಯಕ್ಕೆ ತುತ್ತಾದಾಗ ಮಣಿಪಾಲ ಇಲ್ಲವೇ ಮಂಗಳೂರಿಗೆ ತೆರಳುವುದು ಸಾಮಾನ್ಯ. ಈ ಸ್ಥಳಗಳಿಗೆ ತೆರಳಲು ಜನ ಕಡಿಮೆ ಖರ್ಚಿನಲ್ಲಿ ಸಿಗುವ ಕೊಂಕಣ ರೈಲ್ವೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಹೊನ್ನಾವರದಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್ ಸೇರಿ ಹಲವು ರೈಲುಗಳನ್ನು ನಿಲುಗಡೆ ಮಾಡಬೇಕು ಎನ್ನುವ ಜನರ ಕೂಗು ಜೋರಾಗಿದೆ.ಇತ್ತೀಚೆಗೆ ಸಂಸದರು ಹೊನ್ನಾವರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲೂ ಸ್ಥಳೀಯ ಜನರು ನೇತ್ರಾವತಿ ಎಕ್ಸ್‌ಪ್ರೆಸ್(ಮಂಗಳೂರು- ಮುಂಬೈ) ರೈಲು ನಿಲುಗಡೆಯ ಬಗ್ಗೆ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಈ ರೈಲನ್ನು ಸಂಸದರು ಹೊನ್ನಾವರದಲ್ಲಿ ನಿಲುಗಡೆ ಮಾಡಿಸಿದರೆ ಅದೆಷ್ಟೊ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು.ಮಂಗಳೂರು- ಮುಂಬೈ ಮಾರ್ಗದಲ್ಲಿ ಸಂಚರಿಸುವ ಈ ರೈಲಿನ ನಿಲುಗಡೆಯಿಂದ ಪ್ರಯಾಣಿಕರಿಗೆ ದೂರದ ನಗರಗಳಿಗೆ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗಲಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು, ಪ್ರವಾಸಿಗರು ಹಾಗೂ ಚಿಕಿತ್ಸೆಗಾಗಿ ಮಂಗಳೂರು ನಗರಗಳಿಗೆ ತೆರಳುವವರಿಗೆ ಸಮಯ ಉಳಿತಾಯವಾಗಲಿದೆ. ವಿಶೇಷವಾಗಿ ರಾತ್ರಿ ಪ್ರಯಾಣಕ್ಕೆ ಸೂಕ್ತ ರೈಲು ಸೌಲಭ್ಯ ದೊರೆಯುವುದರಿಂದ ಬಸ್‌ಗಳ ಮೇಲಿನ ಅವಲಂಬನೆಯೂ ಕಡಿಮೆಯಾಗಬಹುದು.ಹೊನ್ನಾವರದಿಂದ ಮಂಗಳೂರಿನ ಕಡೆಗೆ ಪ್ರಯಾಣಿಸುವ ಸಾರ್ವಜನಿಕರಲ್ಲಿ ಹೆಚ್ಚಿನಂಶ ಆಸ್ಪತ್ರೆ ಹಾಗೂ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಉದ್ದೇಶಕ್ಕಾಗಿ ಪ್ರಯಾಣಿಸುತ್ತಾರೆ. ಪ್ರತಿದಿನ ಮುಂಬೈನಿಂದ ಕೇರಳಕ್ಕೆ ಚಲಿಸುವ ಈ ರೈಲು ರಾತ್ರಿ 1.30ರಿಂದ 2.30 ಅವಧಿಯಲ್ಲಿ ಹೊನ್ನಾವರ ರೈಲ್ವೆ ಸ್ಟೇಷನ್ ಮೂಲಕ ಹಾದು ಬೆಳಗ್ಗೆ 5.30ರಿಂದ 6.30ರ ಅವಧಿಯಲ್ಲಿ ಮಂಗಳೂರಿಗೆ ತಲುಪುತ್ತದೆ. ಇದರಿಂದ ಅಲ್ಲಿಂದ ಮತ್ತೆ ಸುಮಾರು ಒಂದು ಗಂಟೆ ಪ್ರಯಾಣವಿರುವ ಕೆ.ಎಸ್. ಹೆಗಡೆ, ಫಾದರ್ ಮುಲ್ಲರ್, ಯೆನಪೋಯಾ ಇತ್ಯಾದಿ ವಿವಿಧ ಆಸ್ಪತ್ರೆಗೆ ಬೆಳಗ್ಗೆ ದಾಖಲಾತಿ ಪಡೆದು ಆರೋಗ್ಯ ತಪಾಸಣೆ ಇತ್ಯಾದಿಗಳನ್ನು ಮಾಡಿಸಲು ತುಂಬಾ ಸಹಾಯವಾಗುತ್ತದೆ.ಈಗ ಇಲ್ಲಿ ನಿಲುಗಡೆಯಿರುವ ರೈಲ್ವೆಗಳಲ್ಲಿ ಪ್ರಯಾಣಿಸಿದರೆ ಪೂರ್ವಾಹ್ನ 11ರಿಂದ 12 ಗಂಟೆಯ ಅವಧಿಯಲ್ಲಿ ಮಂಗಳೂರಿಗೆ ತಲುಪುವುದರಿಂದ, ಆಸ್ಪತ್ರೆಯಲ್ಲಿ ಒಪಿಡಿಯ ಎಲ್ಲ ಪ್ರಕ್ರಿಯೆಗಳು ಅದೇ ದಿನ ಮಾಡಲು ಸಾಧ್ಯವಾಗದೇ ತುಂಬಾ ತೊಂದರೆ ಅನುಭವಿಸಬೇಕಾಗಿದೆ.
ಅಲ್ಲದೆ ರಜೆ ಇತ್ಯಾದಿ ಅವಶ್ಯ ಸಂದರ್ಭದಲ್ಲಿ ಆಗಾಗ ಮನೆಗೆ ಬಂದ ವಿದ್ಯಾರ್ಥಿಗಳು ಈ ರೈಲಿನಲ್ಲಿ ಪ್ರಯಾಣಿಸಿದರೆ ಬೆಳಗ್ಗೆ 9 ಗಂಟೆಗೆ ಮಂಗಳೂರಿನ ಶಾಲಾ- ಕಾಲೇಜುಗಳ ತರಗತಿಗೆ ಹಾಜರಾಗಲು ತುಂಬಾ ಅನುಕೂಲವಾಗುತ್ತದೆ.ಹೊನ್ನಾವರದ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಉತ್ತೇಜನ ನೀಡಲಿದೆ. ಇಕೋ- ಟೂರಿಸಂ, ಕಡಲತೀರ, ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ. ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿಯೂ ಚಟುವಟಿಕೆ ಹೆಚ್ಚಾಗಬಹುದು. ಸ್ಥಳೀಯ ಉತ್ಪನ್ನಗಳು ಹಾಗೂ ಮೀನುಗಾರಿಕಾ ವಲಯಕ್ಕೆ ಮಾರುಕಟ್ಟೆ ಸಂಪರ್ಕ ವಿಸ್ತರಿಸಲು ನೆರವಾಗಬಹುದು. ಕೈಗಾರಿಕೆಗಳು ಮತ್ತು ಹೊಸ ಉದ್ಯಮಗಳು ಹೊನ್ನಾವರದತ್ತ ಆಕರ್ಷಿತವಾಗಲು ರೈಲು ಸಂಪರ್ಕ ಸಹಕಾರಿಯಾಗಲಿದೆ.ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಹೊನ್ನಾವರದಲ್ಲಿ ನಿಲುಗಡೆ ಆಗಬೇಕೆಂಬುದು ನಮ್ಮ ಒತ್ತಾಸೆ. ಈ ರೈಲು ನಿಲುಗಡೆ ಆದರೆ ಮಂಗಳೂರಿಗೆ ತೆರಳುವವರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಅದರಲ್ಲೂ ಆಸ್ಪತ್ರೆಗೆ ಹೋಗುವವರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಸ್ಥಳೀಯರಾದ ಈಶ್ವರ ಗೌಡ ತಿಳಿಸಿದರು.