ಹೊಸ ಜಾತಿ ಗಣತಿ ಸಮೀಕ್ಷೆಗೆ ಆಗ್ರಹ

| Published : Aug 18 2024, 01:49 AM IST

ಸಾರಾಂಶ

ಕರ್ನಾಟಕ ಜಾತಿ ಗಣತಿ ಸಮೀಕ್ಷೆ ತಪ್ಪಿನಿಂದ ಕೂಡಿದೆ. ಕೂಡಲೇ ಸರ್ಕಾರ ಹೊಸ ಸಮೀಕ್ಷೆ ಮಾಡಬೇಕು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕರ್ನಾಟಕ ಜಾತಿ ಗಣತಿ ಸಮೀಕ್ಷೆ ತಪ್ಪಿನಿಂದ ಕೂಡಿದ್ದು, ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯವಾಗಿದ್ದು, ಕೂಡಲೇ ಸರ್ಕಾರ ಹೊಸ ಸಮೀಕ್ಷೆ ಮಾಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಒತ್ತಾಯಿಸಿದರು.

ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ 10. 55 ಕೋಟಿ ರು. ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಒಕ್ಕಲಿಗರ ಸಮುದಾಯ ಭವನದಲ್ಲಿ ಅಯೋಜಿಸಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ 1.30 ಕೋಟಿ ಯಷ್ಟು ಒಕ್ಕಲಿಗರ ಇದ್ದಾರೆ. ಆದರೆ ಜಾತಿ ಸಮೀಕ್ಷೆಯಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ತೋರಿಸಲಾಗಿದೆ. ಈ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಈ ಬಗ್ಗೆ ಕಾನೂನು ರೀತಿಯ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.

ರಾಜ್ಯಕ್ಕೆ, ದೇಶಕ್ಕೆ ಒಕ್ಕಲಿಗರ ಕೊಡುಗೆ ದೊಡ್ಡದಿದೆ. ನಾಡಪ್ರಭು ಕೆಂಪೇಗೌಡ ಬೆಂಗಳೂರನ್ನು ಕಟ್ಟಿ, ಜಾತ್ಯಾತೀತ ಆಡಳಿತ ನೀಡಿದರು. ಇವತ್ತು ಬೆಂಗಳೂರು ಐಟಿ, ಬೀಟಿಯಲ್ಲಿ ಇಡೀ ಪ್ರಪಂಚವನ್ನು ತನ್ನತ್ತ ಸೆಳೆಯುತ್ತಿದೆ. ರಾಜಕೀಯವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ನಮ್ಮ ಜನಾಂಗದ ಪ್ರಮುಖರು ದೊಡ್ಡಮಟ್ಟದ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘ ಸಂಘಟನೆ, ಶಿಕ್ಷಣ ಹಾಗು ಆರೋಗ್ಯ ಸೇವೆಗೆ ಹೆಚ್ಚಿನ ಆಧ್ಯತೆ ನೀಡಿ ಕೆಲಸ ಮಾಡುತ್ತಿದೆ. ಸೋಮವಾರಪೇಟೆಯಲ್ಲಿ 250 ಬೆಡ್‍ಗಳ ಸುಸಜ್ಜಿತ ವಸತಿಗೃಹ ನಿರ್ಮಾಣವಾಗಲಿದೆ. ಕುಶಾಲನಗರದಲ್ಲೂ ವಸತಿ ಶಾಲೆ ನಿರ್ಮಾಣಕ್ಕೆ ಆಡಳಿತ ಮಂಡಳಿಯಿಂದ ಅನುಮೋದನೆ ಸಿಕ್ಕಿದೆ. ಈಗಾಗಲೇ ಜಾಗ ಖರೀದಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ 2 ಲಕ್ಷದಷ್ಟು ಒಕ್ಕಲಿಗ ಜನಾಂಗದವರಿದ್ದು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕಲ್ಪಿಸುವ ಭರವಸೆ ನೀಡಿದರು.

ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಇಲ್ಲಿಯವರೆಗೆ ಒಕ್ಕಲಿಗರ ಸಂಘದಿಂದ ತಾಲೂಕಿಗೆ ದೊಡ್ಡಮಟ್ಟದ ಅನುದಾನ ಸಿಕ್ಕಿಲ್ಲ. ಈಗ ಬಾಲಕಿಯರ ವಸತಿ ಗೃಹದ ಕನಸು ನನಸ್ಸಾಗಿದೆ. ಸಂಘದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಅನುದಾನ ದೊರೆತ್ತಿದೆ. ವಸತಿ ಗೃಹದೊಂದಿಗೆ ಹೃದ್ರೋಗಕ್ಕೆ ಸಂಬಂಧಿಸಿ ಹೈಟೆಕ್ ಕ್ಲಿನಿಕ್ ಸ್ಥಾಪಿಸಲು ಕ್ರಮ ವಹಿಸಲಾಗುವುದು. ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಗ್ರಾಮೀಣ ಭಾಗದ ರೈತರಿಗೆ ಸೂಕ್ತ ಪ್ರಥಮ ಚಿಕಿತ್ಸೆ ಸಿಗದೇ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತ ಸಂಭವಿಸಿದ ವ್ಯಕ್ತಿ ನಗರ ಪ್ರದೇಶದ ಆಸ್ಪತ್ರೆಗೆ ತಲುಪಲು ಕನಿಷ್ಠ 5 ರಿಂದ 8 ಗಂಟೆಗಳ ಸಮಯ ಬೇಕಾಗಿದೆ. ಪ್ರಥಮ ಚಿಕಿತ್ಸೆ ಸಿಕ್ಕರೆ ಒಂದಷ್ಟು ಜೀವಗಳನ್ನು ಉಳಿಯುತ್ತವೆ ಎಂಬ ದೃಷ್ಟಿಯಿಂದ ಇಸಿಜಿ, ಇಕೋ ಸೇರಿದಂತೆ ಇತರ ಉಪಕರಣಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲೂಕು ಅಧ್ಯಕ್ಷ ಎ. ಆರ್. ಮುತ್ತಣ್ಣ, ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ತಾಲೂಕು ಅಧ್ಯಕ್ಷ ಕೆ. ಬಿ. ಸುರೇಶ್, ಕೊಡಗು ಗೌಡ ಫೆಡರೇಷನ್ ಅಧ್ಯಕ್ಷ ಸುರ್ತಲೆ ಸೋಮಣ್ಣ, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಪ್ರಕಾಶ್, ಸಿ.ದೇವರಾಜ್, ಹನುಮಂತರಾಯಪ್ಪ, ಎಸ್.ಎನ್.ರಘು, ಶ್ರೀನಿವಾಸ್, ಚಂದ್ರಶೇಖರ್, ಡಾ.ಟಿ.ಎಚ್. ಅಂಜನಪ್ಪ, ಪೂರ್ಣೇಶ್ ಇದ್ದರು.