ಸಾರಾಂಶ
ಯಲಬುರ್ಗಾ: ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ವತಿಯಿಂದ ಪಟ್ಟಣದ ತಹಸಿಲ್ ಕಚೇರಿಯ ಶಿರಸ್ತೇದಾರ ಮಲ್ಲಿಕಾರ್ಜುನ ಶಾಸ್ತ್ರೀಮಠಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕಾಧ್ಯಕ್ಷ ದಾನನಗೌಡ ತೊಂಡಿಹಾಳ ಮಾತನಾಡಿ, ಪ್ರಕೃತಿ ವಿಕೋಪದಿಂದ ಪ್ರಸಕ್ತ ಸಾಲಿನಲ್ಲಿ ರೈತರು ಬೆಳೆದ ಬೆಳೆಗಳು ಇಳುವರಿ ಕುಂಠಿತಗೊಂಡಿವೆ. ಪರಿಣಾಮ ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ದಲ್ಲಾಳಿಗಳು ರೈತರನ್ನು ವಂಚಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಾನಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದರೂ ಮಾರುಕಟ್ಟೆಯಲ್ಲಿ ಬೆಳೆಗಳು ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಮೆಕ್ಕೆಜೋಳ ಬೆಂಬಲ ಬೆಲೆ ಯೋಜನೆಯಡಿ ಅತಿ ಶೀಘ್ರದಲ್ಲಿ ಖರೀದಿ ಕೇಂದ್ರ ಆರಂಭಿಸಲು ಹಾಗೂ ಬೆಳೆ ಹಾನಿ ಮತ್ತು ಬೆಳೆ ವಿಮಾ ಸಮರ್ಪಕವಾಗಿ ವಿತರಿಸುವಂತೆ ಆಗ್ರಹಿಸಿದರು.ಪಟ್ಟಣದ ಕೆಂಪು ಕೆರೆ ತುಂಬಿರುವುದರಿಂದ ಕೆರೆ ಸುತ್ತಲಿನ ರೈತರ ನೂರಾರು ಎಕರೆ ಬೆಳೆಗೆ ನೀರು ನುಗ್ಗಿ ಹಾನಿಯಾಗಿದೆ. ನೀರು ಹೋಗಲು ಕೆರೆಯ ಸುತ್ತಲು ಬಸಿಗಾಲುವೆ ತೆಗೆದು ರೈತರ ಬೆಳೆ ಉಳಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಜಮೀನಿಗೆ ತೆರಳುವ ರಸ್ತೆ ಹದಗೆಟ್ಟಿದ್ದು, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಈ ಎಲ್ಲ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ ನೂತನವಾಗಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ (ಉತ್ತರ ಕರ್ನಾಟಕ ಪ್ರಾಂತ) ತಾಲೂಕು ಘಟಕ ಉದ್ಘಾಟಿಸಲಾಯಿತು.ಈ ವೇಳೆ ರೈತ ಮುಖಂಡರಾದ ಬಸಲಿಂಗಪ್ಪ ಭೂತೆ, ಬಿ.ಎಸ್. ಅಧಿಕಾರಿ, ಬಸವರಾಜ ಗುಳಗುಳಿ, ಶರಣಬಸಪ್ಪ ದಾನಕೈ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಜಗದೀಶ ಸಂಕನಗೌಡ್ರ, ಸುರೇಶಗೌಡ ಶಿವನಗೌಡ್ರ, ರುದ್ರಗೌಡ ಸೊಲಬಗೌಡ್ರ, ಸಿದ್ದಪ್ಪ ಅಕ್ಕಿಗೋಣಿ ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))