ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್
35 ವರ್ಷಗಳ ಕಾಲ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿದ ನಂತರ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯ ಮತ್ತು ಆರೋಗ್ಯ ಭಾಗ್ಯ ಯೋಜನೆ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ನಿವೃತ್ತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಆಗ್ರಹಿಸಿದರು.ಪಟ್ಟಣದ ಹೀರಾ ಗಾರ್ಡನ್‌ನಲ್ಲಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ 80 ವರ್ಷ ಮೇಲ್ಪಟ್ಟ ನೌಕರರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಸಿಎಂ ಎಸ್ಆರ್ ಬೊಮ್ಮಾಯಿ ಅವರು ಹೇಳಿದಂತೆ ನಾವು ನಿವೃತ್ತ ನೌಕರರಲ್ಲ, ನಿರಂತರ ಸೇವೆ ಮಾಡುವ ನೌಕರರಾಗಿದ್ದು, ನಮ್ಮ ಹಕ್ಕು, ನಮ್ಮ ಸೌಲಭ್ಯಕ್ಕಾಗಿ ನಾವೆಲ್ಲಾ ನಿವೃತ್ತರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು.ನೆರೆ ರಾಜ್ಯಗಳ ಮಾದರಿಯಂತೆ 70-75 ವರ್ಷ, 75-80 ವರ್ಷ ವಯೋಮಿತಿ ಮೀರಿದ ರಾಜ್ಯ ನಿವೃತ್ತ ನೌಕರರಿಗೆ ಮೂಲ ಪಿಂಚಣಿಯಲ್ಲಿ ಅನುಕ್ರಮವಾಗಿ ಶೇ.10, ಶೇ.15 ರಷ್ಟು ಹೆಚ್ಚುವರಿ ಪಿಂಚಣಿ ನೀಡಬೇಕು. 80 ವರ್ಷ ವಯೋಮಿತಿ ಮೀರಿದವರಿಗೆ ಶೇ.20ರಷ್ಟು ಅರ್ಥಿಕ ಸೌಲಭ್ಯ ನೀಡುತ್ತಿರುವುದನ್ನು 79ವರ್ಷಕ್ಕೆ ಇಳಿಸಬೇಕು. ಕೆಎಸ್ಆರ್‌ಟಿಸಿ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದರ ಶೇ.25ರಿಂದ ಶೇ.50ರಷ್ಟು ರಿಯಾಯಿತಿ ಮತ್ತು ನಿವೃತ್ತಿ ನೌಕರರ ಸಂಘಕ್ಕೆ ರಿಯಾಯತಿ ದರದಲ್ಲಿ ನಿವೇಶನ ಮಂಜೂರಾತಿ ಹಾಗೂ ಶವಸಂಸ್ಕಾರಕ್ಕೆ ₹10 ಸಾವಿರ ಮಂಜೂರಾತಿ ಪಡೆಯಲು ನಾವು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.
ಸಿದ್ದಲಿಂಗಪ್ಪ ಮೋಟ್ನಳ್ಳಿ, ಲಕ್ಮಯ್ಯ ಕಲಾಲ್, ಚಂದ್ರಶೇಖರ ಮಂಚಾಲ್, ವಿರೂಪಾಕ್ಷಪ್ಪ, ತಿಪ್ಪಣ್ಣ ತಾಂಡೂರ್ ಕರ್, ಮಹಮ್ಮದ್ ಅಲಿ, ಮೌನೇಶ್ವರ್ ರಾವ್ ಒಟ್ಟು 9 ಜನರಿಗೆ ಸನ್ಮಾನಿಸಲಾಯಿತು.ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಕಿಷ್ಟಪ್ಪ ಪುರಷೋತ್ತಮ, ನೌಕರರ ಸಂಘದ ತಾಲೂಕಾಧ್ಯಕ್ಷ ಸಂತೋಷ್ ಕುಮಾರ್ ನೀರೆಟಿ, ಪಂಡರಿ ದೊಡ್ಲ, ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ, ಶಂಕರಗೌಡ ಬಿರಾದಾರ್, ಸಿದ್ದಣ್ಣ ಕೊಲಾರ್, ಅಖಂಡೇಶ್ವರಯ್ಯ ಸ್ವಾಮಿ, ಎಎಸ್ಐ ಭೀಮಣ್ಣ, ಎಸ್ಬಿಐ ವ್ಯವಸ್ಥಾಪಕ ಶಾಮಸುಂದರ್, ಬಂಡಪ್ಪ ಅಕುಲ್, ನಾರಾಯಣ ಸಾಕಾ, ಸಿ.ಎಂ. ಪಟ್ಟೇದಾರ್ ಇತರರಿದ್ದರು.