ನಿಗದಿತ ಸಮಯಕ್ಕೆ ಮಾಸಾಶನ ನೀಡುವಂತೆ ಆಗ್ರಹ

| Published : Feb 08 2024, 01:32 AM IST

ಸಾರಾಂಶ

ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯ ಮುಂದೆ ವಿಕಲಚೇತನರ ಸಂಘದಿಂದ ಪ್ರತಿಭಟಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿರಸ್ತೇದಾರ್‌ಗೆ ಅಂಬಾದಾಸ್‌ಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಏಳೆಂಟು ತಿಂಗಳಿಂದ ವಿಳಂಬ ಮಾಡುತ್ತಿರುವ ವಿಕಲಚೇತನರ ಮಾಸಾಶನಕ್ಕೆ ಅರ್ಜಿಯನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಮಾಸಾಶನವನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದು ವಿಕಲಚೇತನರ ಎಂಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ಸಂಘದ ವತಿಯಿಂದ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳನ್ನು ಕರೆದು ಕುಂದು-ಕೊರತೆ ಸಭೆ ನಡೆಸಬೇಕು. ಸರ್ಕಾರದ ಆದೇಶದ ಪ್ರಕಾರ ವಿಕಲಚೇತನರ ಶೇ.5ರಷ್ಟು ಅನುದಾನವನ್ನು ನಗರಸಭೆ ಪೌರಾಯುಕ್ತರು, ತಾಪಂ ಇಒ, ಪಪಂ ಮುಖ್ಯಾಧಿಕಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಖರ್ಚು ಮಾಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಿವಿ ಮತ್ತು ಕಣ್ಣಿನ ತಜ್ಞ ವೈದ್ಯರು ಇದ್ದರೂ ಪ್ರಮಾಣ ಪತ್ರ ಕೊಡುತ್ತಿಲ್ಲ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ವಿಕಲಚೇತನರಿಗೆ ಯುಡಿಐಡಿ ಕಾರ್ಡ್‌ಗಳನ್ನು ಕೊಡಲು ಆದೇಶ ನೀಡಬೇಕು. ಸಿಂಧನೂರು ನಗರದ ವಾರ್ಡ್ ನಂ.29 ರಲ್ಲಿ ವಿಕಲಚೇತನರ ಭವನ ನಿರ್ಮಾಣ ಕಾರ್ಯ ಸುಮಾರು 8 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದು, ಇದನ್ನು ಶೀಘ್ರ ಪೂರ್ಣಗೊಳಿಸಿ ಸೇವೆಗೆ ಅನುಕೂಲ ಮಾಡಿಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಬಸವರಾಜ ಸಾಸಲಮರಿ, ಸದಸ್ಯರಾದ ಮಹ್ಮದ್ ಹುಸೇನ್ಸಾಬ ಪರಾಪೂರ, ದೇವೇಂದ್ರಗೌಡ, ಹನುಮಂತ ಗಿಣಿವಾರ, ಕೆ.ಬೀರಪ್ಪ ಗೊರೇಬಾಳ, ವೀರಭದ್ರಪ್ಪ ಜಾಲಿಹಾಳ, ನಾಗಪ್ಪ ಸುಕಾಲಪೇಟೆ ಇದ್ದರು.