ಕನ್ನಡಪ್ರಭ ವಾರ್ತೆ, ತುಮಕೂರುನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಬ್ಯಾಂಕ್ ನಿವೃತ್ತರ ಸಂಘಟನೆಗಳ ಸಂಯುಕ್ತ ವೇದಿಕೆ ಹಾಗೂ ಎಐಬಿಆರ್‌ಎಫ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ನಿವೃತ್ತ ಬ್ಯಾಂಕ್ ನೌಕರರು ತಮ್ಮ ಪಿಂಚಣಿ ಪರಿಷ್ಕರಿಸುವಂತೆ ಘೋಷಣೆ ಕೂಗುತ್ತಾ ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತರಾಮನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳ ನಿವೃತ್ತರನ್ನೊಳಗೊಂಡ 3 ಲಕ್ಷಕ್ಕೂ ಅಧಿಕ ನಿವೃತ್ತರಿದ್ದು, ಬ್ಯಾಂಕ್‌ಗಳಲ್ಲಿ 1995 ರಿಂದ ಜಾರಿಗೆ ಬಂದ ಪಿಂಚಣಿ ಯೋಜನೆಯ ದಿನಾಂಕದಿಂದ ಇಂದಿನವರೆಗೆ ಪಿಂಚಣಿಯನ್ನು ಪರಿಷ್ಕರಿಸಲಾಗಿಲ್ಲ. ಪಿಂಚಣಿ ಕುರಿತು ಒಪ್ಪಂದವಾದ ಸಮಯದಲ್ಲಿ ಕೇಂದ್ರ ಸರ್ಕಾರದ ಪಿಂಚಣಿದಾರರು ಮತ್ತು ಆರ್‌ಬಿಐ ಪಿಂಚಣಿದಾರರಿಗೆ ಮಾಡುವಂತೆ ಬ್ಯಾಂಕ್ ನಿವೃತ್ತ ನೌಕರರ ಪಿಂಚಣಿಯನ್ನು ಕಾಲ ಕಾಲಕ್ಕೆ ಪರಿಷ್ಕರಿಸುವುದಾಗಿ ಒಪ್ಪಿಕೊಂಡಿದ್ದರು. ಕೇಂದ್ರ ಸರ್ಕಾರದ ನಿವೃತ್ತರ ಪಿಂಚಣಿ ಕೇಂದ್ರ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ. ಆರ್‌ಬಿಐ ಪಿಂಚಣಿಯನ್ನು ಮೂರು ಬಾರಿ ಪರಿಷ್ಕರಿಸಲಾಗಿದೆ. ಆದರೆ ಬ್ಯಾಂಕ್ ನಿವೃತ್ತ ನೌಕರರ ಪಿಂಚಣಿ30 ವರ್ಷಗಳಾದರೂ ಪರಿಷ್ಕರಿಸಲಾಗಿಲ್ಲ ಎಂದು ದೂರಿದರು.

ಬ್ಯಾಂಕ್ ಉದ್ಯೋಗಿಗಳ ಪಿಂಚಣಿ ನಿಧಿಯಲ್ಲಿ 4 ಲಕ್ಷ ಕೋಟಿಗೂ ಅಧಿಕ ನಿಧಿ ಸಂಗ್ರಹವಾಗಿದೆ. ಈ ದೊಡ್ಡ ನಿಧಿಗೆ ನಿವೃತ್ತರೂ ಕೊಡುಗೆ ನೀಡಿದ್ದಾರೆ. ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡಿರುವ ಸೇವೆಯಲ್ಲಿರುವ ಬ್ಯಾಂಕ್ ಉದ್ಯೋಗಿಗಳು ಪ್ರತಿ ಮಾಸವೂ ಈ ನಿಧಿಗೆ ಕೊಡುಗೆ ನೀಡುತ್ತಿದ್ದಾರೆ. ಜತೆಗೆ ಬ್ಯಾಂಕ್‌ಗಳು ಸಹ ಸಮಾನ ಮೊತ್ತ ನೀಡುತ್ತಿವೆ. ಆದರೂ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮನಸ್ಸು ಮಾಡಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ಎಐಬಿಆರ್‌ಎಫ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥನಾಯಕ್, ಯುಎಫ್‌ಬಿಆರ್‌ಓ ಜಂಟಿ ಸಂಚಾಲಕ ಸಿ.ಎನ್. ಪ್ರಸಾದ್, ಎಐಬಿಆರ್‌ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಜಿ. ಮಹಾಲಿಂಗಪ್ಪ, ಬ್ಯಾಂಕ್ ನಿವೃತ್ತ ನೌಕರರ ವೇದಿಕೆಯ ತುಮಕೂರು ಅಧ್ಯಕ್ಷ ಟಿ.ಎನ್. ರಮೇಶ್, ಎಸ್‌ಬಿಎಂ ಪಿಂಚಣಿದಾರರ ಸಂಘದ ಕಾರ್ಯದರ್ಶಿ ನಟರಾಜು, ಜಾನಕಿರಾಮ್, ಬ್ರಹ್ಮರಾಯಪ್ಪ, ಧನಲಕ್ಷ್ಮಿಮಬಾಯಿ ಸೇರಿದಂತೆ ನೂರಾರು ಮಂದಿ ನಿವೃತ್ತ ಬ್ಯಾಂಕ್ ನೌಕರರು ಭಾಗವಹಿಸಿದ್ದರು.