ಸಾರಾಂಶ
ಕುಮಟಾ: ಇಲ್ಲಿನ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ತಾಲೂಕು ಘಟಕದಿಂದ ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
೭ನೇ ವೇತನ ಆಯೋಗದ ವರದಿಯಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು 2024ರ ಆ. ೧ರಿಂದ ನಗದಾಗಿ ಪಾವತಿ ಮಾಡಬೇಕು. 2022ರ ಜು. 1ರಿಂದ 2024 ಜು. ೩೧ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸಬೇಕು.ಈ ಕಾಲ್ಪನಿಕ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಫಲಾನುಭವಿಗೆ 2024ರ ಆ. ೧.ರಿಂದ ಪ್ರಾಪ್ತವಾಗಬೇಕು. ೨೦೨೪ರ ಆಗಸ್ಟ್‌ದಿಂದ ನಿವೃತ್ತಿ ಹೊಂದುವ ಅಧಿಕಾರಿ/ನೌಕರರು ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯವು ಲಭ್ಯವಾಗುತ್ತಿದ್ದು, ಅವರಂತೆ ನಾವು ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ.ಪ್ರಸ್ತುತ ಸೇವೆಯಲ್ಲಿರುವ ಇತರ ಅಧಿಕಾರಿ/ ನೌಕರರಂತೆ 2022ರ ಜು. ೧ರಿಂದಲೇ ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಷನ್, ಇಎಲ್ ನಗದೀಕರಣ ಲೆಕ್ಕಾಚಾರದ ವ್ಯತ್ಯಾಸ ನೀಡಬೇಕು. ನ್ಯಾಯೋಚಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ದೊರಕಿಸಿ ಕೊಡುವಂತೆ ನಿವೃತ್ತ ನೌಕರರು ಮನವಿಯಲ್ಲಿ ವಿನಂತಿಸಿದ್ದಾರೆ. ಸಂಘದ ಜಿಲ್ಲಾ ಸಂಚಾಲಕ ಬಿ.ಡಿ. ನಾಯ್ಕ, ತಾಲೂಕು ಸಂಚಾಲಕ ಅರುಣ ಹೆಗಡೆ, ಉಲ್ಲಾಸ ನಾಯ್ಕ, ವಸಂತ ಭಂಡಾರಿ, ಸಂಜೀವ ನಾಯಕ, ಹರಿಶ್ಚಂದ್ರ ಗುನಗಾ, ಸ್ವರ್ಣಗೌರಿ ಹೆಗಡೆ, ವಿನಾಯಕ್ ಭಟ್, ಎಸ್.ಐ. ನಾಯ್ಕ ಇತರರು ಇದ್ದರು.