ಜಿಲ್ಲಾ ಆಸ್ಪತ್ರೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ (ಕಲ್ಲುಕಟ್ಟಡ) ಭೂ ಸ್ವಾಧೀನವಾದಂತೆ ಒತ್ತುವರಿಯಾಗಿರುವ ಜಮೀನುಗಳು, ಖಾಸಗಿ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ನಿಯಮಬಾಹಿರವಾಗಿ ಮಂಜೂರು ಮಾಡಿರುವ ಜಮೀನುಗಳನ್ನು ತೆರವುಗೊಳಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಒದಗಿಸಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಆಸ್ಪತ್ರೆ ಜಾಗದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇಲ್ಲದೆ ಖಾಲಿ ಇರುವ ೨.೩೩ ಎಕರೆ ಜಾಗವನ್ನೂ ಕೂಡಲೇ ಜಿಲ್ಲಾಡಳಿತ ವಶಕ್ಕೆ ಪಡೆದು ಟ್ರಾಮಾ ಕೇರ್ ಸೆಂಟ್ ನಿರ್ಮಾಣಕ್ಕೆ ಮೀಸಲಿಡುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.ಜಿಲ್ಲಾ ಆಸ್ಪತ್ರೆ ಹಾಗೂ ಸರ್ಕಾರಿ ಪ್ರೌಢಶಾಲೆಗೆ (ಕಲ್ಲುಕಟ್ಟಡ) ಭೂ ಸ್ವಾಧೀನವಾದಂತೆ ಒತ್ತುವರಿಯಾಗಿರುವ ಜಮೀನುಗಳು, ಖಾಸಗಿ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ನಿಯಮಬಾಹಿರವಾಗಿ ಮಂಜೂರು ಮಾಡಿರುವ ಜಮೀನುಗಳನ್ನು ತೆರವುಗೊಳಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ಮಹಾರಾಜರು ಮಂಡ್ಯ ಗ್ರಾಮಕ್ಕೆ ಸೇರಿದ ವಿವಿಧ ಸರ್ವೇ ನಂಬರ್‌ಗಳಲ್ಲಿ ಜಿಲ್ಲಾಸ್ಪತ್ರೆಗಾಗಿ ೧೯೪೧ನೇ ಇಸವಿಯಲ್ಲಿ ೨೨ ಎಕರೆ ಆರೂವರೆಗುಂಟೆ, ೧೯೪೮ರಲ್ಲಿ ಆಸ್ಪತ್ರೆ ವಿಸ್ತರಣೆಗಾಗಿ ೧೭ ಎಕರೆ ೨೬ ಗುಂಟೆ ಹಾಗೂ ೧೯೪೭ರಲ್ಲಿ ಸರ್ಕಾರಿ ಪ್ರೌಢಶಾಲೆ (ಕಲ್ಲುಕಟ್ಟಡ)ಗೆ ೨೧ ಎಕರೆ ೩೧ ಗುಂಟೆ ಹಾಗೂ ಖರಾಬು ಜಮೀನು ಸೇರಿ ಒಟ್ಟು ೭೮ ಎಕರೆ ೧೫ ಗುಂಟೆ ಜಮೀನನ್ನು ರೈತರಿಂದ ಭೂ ಸ್ವಾಧೀನಪಡಿಸಿಕೊಂಡು ನೀಡಿದ್ದರು ಎಂದರು.ಆ ನಂತರದಲ್ಲಿ ಉದ್ದೇಶಿತ ಜಮೀನನ್ನು ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿದ್ದರೆ, ನಗರಸಭೆ ಕೆಲವು ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಈ ಜಮೀನುಗಳ ಒತ್ತುವರಿ ತೆರವುಗೊಳಿಸಲು ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗಿ ೭.೯.೨೦೧೫ರಂದು ತಮಿಳು ಕಾಲೋನಿಯವರಿಗೆ ಪುನರ್ವಸತಿ ಕಲ್ಪಿಸಿ ಜಾಗ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆ ನಂತರದಲ್ಲಿ ನ್ಯಾಯಾಲಯದ ಆದೇಶ ಪಾಲಿಸದಿದ್ದರಿಂದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಮಿಮ್ಸ್ ಆಸ್ಪತ್ರೆಗೆ ಮಂಜೂರಾದ ಜಮೀನಿನ ಉಪಯುಕ್ತತೆ ಬಗ್ಗೆ ಸರ್ಕಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು ಎಂದರು.ಮಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕಾಮಗಾರಿ ಮತ್ತು ಉಪಕರಣಗಳ ಖರೀದಿಗೆ ೨೮.೨.೨೦೧೯ರಲ್ಲಿ ೩೦ ಕೋಟಿ ರು.ಗೆ ಅನುಮೋದನೆ ನೀಡಿ ಸಿವಿಲ್ ಕಾಮಗಾರಿಗಳಿಗಾಗಿ ೧೦ ಕೋಟಿ ರು.ಗಳನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ಜಾಗದ ಕೊರತೆಯಿಂದ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲವೆಂದು ಮಿಮ್ಸ್ ನಿರ್ದೇಶಕರು ಹಿಂಬರಹದಲ್ಲಿ ತಿಳಿಸಿದ್ದರು ಎಂದು ವಿವರಿಸಿದರು.
ರಾಜ್ಯ ಉಚ್ಛ ನ್ಯಾಯಾಲಯ ೪.೫.೨೦೧೦ರಲ್ಲಿ ನೀಡಿರುವ ಮಧ್ಯಂತರ ಆದೇಶದಲ್ಲಿ ಸರ್ವೇ ನಂ. ೧೮/೧ರಲ್ಲಿ ೨೩ ಗುಂಟೆ, ೧೮/೨ರಲ್ಲಿ ೧೩ ಗುಂಟೆ ಹಾಗೂ ೨೩/೩ರಲ್ಲಿ ೧ ಎಕರೆ ೩೩ ಗುಂಟೆ ಜಮೀನನ್ನು ಜಿಲ್ಲಾಧಿಕಾರಿಗಳು ಮತ್ತು ಮಂಡ್ಯ ತಾಲೂಕು ತಹಸೀಲ್ದಾರ್ ಅವರು ಸ್ಲಂಬೋರ್ಡ್‌ಗೆ ಮಂಜೂರು ಮಾಡಿರುವ ಬಗ್ಗೆ ತಡೆಯಾಜ್ಞೆ ನೀಡಿ ಜಮೀನಿನ ಮಂಜೂರಾತಿಯನ್ನು ವಾಪಸ್ ಪಡೆಯಲಾಗಿದೆ. ಈ ಜಾಗವು ಈಗ ಖಾಲಿ ಇದ್ದು ಯಾವುದೇ ತಡೆಯಾಜ್ಞೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ತಮಿಳು ಕಾಲೋನಿ ನಿವಾಸಿಗಳು ೫ ಎಕರೆ ೨೫ ಗುಂಟೆ ಜಾಗಕ್ಕೆ ಮಾತ್ರ ರಾಜ್ಯ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಉಳಿದ ೨ ಎಕರೆ ೩೩ ಗುಂಟೆ ಜಾಗದಲ್ಲಿ ಟ್ರಾಮಾ ಕೇರ್ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಇದರ ಜೊತೆಗೆ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಹಾಗೂ ಸಂಘ-ಸಂಸ್ಥೆಗಳಿಗೆ ನಿಯಮಬಾಹಿರವಾಗಿ ಮಂಜೂರು ಮಾಡಿರುವ ಜಮೀನುಗಳನ್ನು ವಶಪಡಿಸಿಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಇಚ್ಛಾಶಕ್ತಿ ಪ್ರದರ್ಶಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಗೋಷ್ಠಿಯಲ್ಲಿ ಎಂ.ಎಸ್.ಅಣ್ಣಯ್ಯ, ಶಿವರಾಮೇಗೌಡ, ಕೆ.ಎಲ್.ಮಧುಸೂಧನ್, ಕಿರಣ್‌ಕುಮಾರ್ ಇದ್ದರು.