ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಸರ್ಕಾರಿ ಅನುದಾನದಲ್ಲಿ ಅಕ್ರಮದ ಶಂಕೆ ವ್ಯಕ್ತವಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜೇನು ಕುರುಬ ಅಭಿವೃದ್ಧಿ ಸಂಘ ಅಧ್ಯಕ್ಷ ಜೆ.ಟಿ.ಕಾಳಿಂಗ ಆಗ್ರಹಿಸಿದರು.

ಮಡಿಕೇರಿ: ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಸರ್ಕಾರಿ ಅನುದಾನದಲ್ಲಿ ಅಕ್ರಮದ ಶಂಕೆ ವ್ಯಕ್ತವಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜೇನು ಕುರುಬ ಅಭಿವೃದ್ಧಿ ಸಂಘ ಅಧ್ಯಕ್ಷ ಜೆ.ಟಿ.ಕಾಳಿಂಗ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐಟಿಡಿಪಿ ಇಲಾಖೆಯಿಂದ ಕೆಆರ್‌ಐಡಿಎಲ್‌ಗೆ ಬಿಡುಗಡೆಯಾದ ಸುಮಾರು ೧೫ ಲಕ್ಷ ರು. ಅನುದಾನದ ಕಾಮಗಾರಿಗಳಲ್ಲಿ ಗಂಭೀರ ಲೋಪಗಳಿವೆ. ತಲಾ ೫ ಲಕ್ಷ ರು. ೨ ಕಾಮಗಾರಿಗಳಲ್ಲಿ ನಮೂದಾಗಿರುವ ವ್ಯಕ್ತಿಗಳು ಆ ಗ್ರಾ.ಪಂ ವ್ಯಾಪ್ತಿಯಲ್ಲಿಯೇ ವಾಸಿಸುತ್ತಿಲ್ಲ. ಈ ಕಾಮಗಾರಿಗಳು ನಿಜವಾಗಿ ನಡೆದಿವೆಯೇ? ಗುಣಮಟ್ಟ ಏನು? ಯಾರ ಹೆಸರಲ್ಲಿ ಮಂಜೂರು? ಯಾರಿಗೆ ಹಣ ಪಾವತಿ ಆಯಿತು? ಎಂದು ಪ್ರಶ್ನಿಸಿದರು.

ಈ ಸಂಬಂಧ ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಕೆಆರ್‌ಐಡಿಎಲ್ ಇಲಾಖೆ ಬೆಂಗಳೂರು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ವಿಚಾರವನ್ನು ಪ್ರಶ್ನಿಸುತ್ತಿರುವ ತಮ್ಮ ಮೇಲೆ ಮೂರನೇ ವ್ಯಕ್ತಿಗಳಿಂದ ಒತ್ತಡ ಮತ್ತು ಹಣದ ಆಮಿಷದ ಪ್ರಯತ್ನ ನಡೆದಿದೆ ಎಂದ ಅವರು, ನಾವು ಯಾರ ಮೇಲೂ ವೈಯಕ್ತಿಕ ಆರೋಪ ಮಾಡುತ್ತಿಲ್ಲ. ಆದರೆ, ಪರಿಶಿಷ್ಟರ ಅಭಿವೃದ್ಧಿ ಹಣದಲ್ಲಿ ಪಾರದರ್ಶಕತೆ ಇರಲೇಬೇಕು ಎಂದು ಹೇಳಿದರು.ಕೊಡಗು ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ಮೂಲಕ ನಡೆದ ಎಲ್ಲ ಪರಿಶಿಷ್ಟ ಪಂಗಡಗಳ ಕಾಮಗಾರಿಗಳ ಸಮಗ್ರ ಪರಿಶೀಲನೆ ನಡೆಸಬೇಕು. ತನಿಖೆ ಮುಗಿಯುವವರೆಗೆ ಅನುಮಾನಿತ ಕಾಮಗಾರಿಗಳ ಹಣ ಬಿಡುಗಡೆ ಸ್ಥಗಿತಗೊಳಿಸಬೇಕು. ಸ್ವತಂತ್ರ ಉನ್ನತ ಮಟ್ಟದ ತನಿಖೆ ನಡೆಸುವುದರ ಜತೆಗೆ ಎಲ್ಲಾ ಕಾಮಗಾರಿಗಳ ದಾಖಲೆ ಸಾರ್ವಜನಿಕಗೊಳಿಸಬೇಕು. ಜಿಲ್ಲೆಯಾದ್ಯಂತ ಸಾಮಾಜಿಕ ಪರಿಶೀಲನೆ ನಡೆಸಬೇಕು. ಅಕ್ರಮ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.ಜಾಗೃತಿ ಸಭೆ ಆಗಿಲ್ಲ: ಸೋಲಿಗ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಮಹೇಶ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಜಿಲ್ಲೆಯ ಹಾಡಿಗಳಲ್ಲಿ ನಡೆಯುತ್ತಿಲ್ಲ. ಜಾಗೃತಿ ಸಭೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚೆತ್ತುಕೊಂಡು ಪ್ರತಿ ಹಾಡಿಗಳಲ್ಲಿಯೂ ಜಾಗೃತಿ ಸಭೆ, ಮನೆಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜೇನು ಕುರುಬ ಅಭಿವೃದ್ಧಿ ಸಂಘ ಸದಸ್ಯ ಜೆ.ಎಸ್.ವಿಶ್ವ ಇದ್ದರು.