ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಾತಿಯಾದ್ದು, ವಿದ್ಯಾರ್ಹತೆ ಹಾಗೂ ಸೇವಾ ಜೇಷ್ಠತೆ ಆಧಾರದ ಮೇಲೆ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸೋಮವಾರ ನಗರದ ಮಹಾವೀರ ವೃತ್ತದ ಬಳಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಲಾಯಿತು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ ಮಾತನಾಡಿ, 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ೨೦೧೬ ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೨೦೧೬ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡುವುದು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೨೦೧೬ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದರು. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ೧,೮೮,೫೩೨ ಶಿಕ್ಷಕರಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿಶೇಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ ೧ ರಿಂದ ೭, ೧ ರಿಂದ ೮ನೇ ತರಗತಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಎನ್.ಸಿ.ಟಿ.ಇ. ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ, ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ಕುರಿತು ವಿಶೇಷ ರಾಜ್ಯ ಪತ್ರವನ್ನು ಹೊರಡಿಸಿದೆ. ೨೦೧೭ ಮೇ ೨೦ ರಂದು ಹೊರಡಿಸಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ೧ ರಿಂದ ೫ಕ್ಕೆ ೧,೧೨,೪೬೭ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ೬ ರಿಂದ ೮ಕ್ಕೆ ೫೧,೭೮೧ ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ಆದೇಶಿಸಿದೆ. ತತ್ಪರಿಣಾಮವಾಗಿ ೨೦೧೬ ಕ್ಕಿಂತ ಮೊದಲು ೧ ರಿಂದ ೭, ೧ ರಿಂದ ೮ ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು ೧ ರಿಂದ ೫ ಎಂದು ಪರಿಗಣಿಸಿದ್ದು, ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ ಎಂದು ದೂರಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಎಚ್. ಅಣ್ಣೇಗೌಡ ಮಾತನಾಡಿ, ವೃಂದಬಲ ನಿಗದಿಯಿಂದ ವೇತನಶ್ರೇಣಿ ವ್ಯತ್ಯಾಸವಾಗಿ ಶಿಕ್ಷಕರ ಮನೋಸ್ಥೆರ್ಯದ ಮೇಲೆ ಋಣಾತ್ಮಕ ಪರಿಣಾಮವಾದಾಗ್ಯೂ, ಈಗಿನವರೆಗೂ ೧ ರಿಂದ ೫ನೇ ತರಗತಿ ಶಿಕ್ಷಕ ವೃಂದದವರೆಂದು ಪರಿಗಣಿತವಾದ ೧ ರಿಂದ ೭, ೧ ರಿಂದ ೮ಕ್ಕೆ ನೇಮಕಾತಿಯಾದ ಶಿಕ್ಷಕರು ಯಾವುದೇ ಆರ್ಥಿಕ ಸೌಲಭ್ಯ ಬಯಸದೇ, ೬ ರಿಂದ ೮ನೇ ತರಗತಿ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ೬ ರಿಂದ ೮ನೇ ತರಗತಿಗೆ ನೇಮಕವಾದ ೨೦, ೧೧೦ ಶಿಕ್ಷಕರು ಕೇವಲ ೬ ರಿಂದ ೮ನೇ ತರಗತಿ ಬೋಧನೆ ಮಾತ್ರ ಮಾಡುತ್ತಿದ್ದು, ೧ ರಿಂದ ೫ನೇ ತರಗತಿ ಬೋಧನೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ ೧ ರಿಂದ ೭ ಮತ್ತು ೧ ರಿಂದ ೮ಕ್ಕೆ ನೇಮಕಾತಿಯಾದ ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಇಲಾಖೆಗೆ ಮುಜುಗರವಾಗದಂತೆ ೧ ರಿಂದ ೮ನೇ ತರಗತಿವರೆಗಿನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಲೋಕೇಶ್ ಕುಮಾರ್, ಗೌರವಾಧ್ಯಕ್ಷೆ ವೈ.ಜೆ. ಮಂಜುಳ, ಡಿ. ರಮೇಶ್, ಉಪಾಧ್ಯಕ್ಷ ಗೌಡ ಲೋಹಿತ್ ಜವರಪ್ಪ, ಎಸ್.ಎನ್. ಶುಭಮಂಗಳ, ಖಜಾಂಚಿ ಬಿ.ಎಚ್. ರಾಜು, ಸಹ ಕಾರ್ಯದರ್ಶಿ ಜಿ.ಡಿ. ಮಂಜುನಾಥ್, ಕೆ.ಎನ್. ಚೈತ್ರ, ಸಂಘಟನಾ ಕಾರ್ಯದರ್ಶಿ ಎಚ್.ವಿ. ಉಮೇಶ್, ಸುಕನ್ಯ, ನಿರ್ದೇಶಕರಾದ ದಾಕ್ಷಾಯಿಣಿ, ಏ.ಜೆ. ವೆಂಕಟೇಶ್, ಎಂ.ಎಸ್. ಕೃಷ್ಣಮೂರ್ತಿ, ಬಿ.ಕೆ. ರವೀಂದ್ರ, ಆರ್. ಆಶಾ, ಹೇಮಾವತಿ, ನಾಯಕರಹಳ್ಳಿ ಮಂಜೇಗೌಡ ಸೇರಿ ಇತರರು ಉಪಸ್ಥಿತರಿದ್ದರು.
ಶಿಕ್ಷಕರಿಗೆ ಅನ್ಯಾಯವಾಗದಂತೆ ನಿಯಮ ರೂಪಿಸಲು ಆಗ್ರಹ:ಸಾಮಾಜಿಕ ನ್ಯಾಯದ ಪರ ಧ್ವನಿಯಾಗಿರುವ ತಾವು ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಬಹುದೊಡ್ಡ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಒಂದು ಕಾರ್ಯಕಾರಿ ಆದೇಶವನ್ನು ಹೊರಡಿಸಲು ಸರಕಾರವನ್ನು ಒತ್ತಾಯಿಸಬೇಕು. ಈ ಮೂಲಕ ಉಲ್ಲಂಘನೆಯಾಗಿರುವ ನಿಯಮಗಳನ್ನು ಸರಿಪಡಿಸುವುದರ ಜೊತೆಗೆ ನಿರಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನಿಯಮ ರೂಪಿಸಬೇಕು. ಮೇಲಿನ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆಯು ಹಲವಾರು ಬಾರಿ ಇಲಾಖೆಗೆ ಮನವಿ, ಸಲಹೆಗಳನ್ನು ನೀಡಿಯೂ ಪ್ರಯೋಜನಕ್ಕೆ ಬಾರದೇ ಹೋಗಿರುವುದು ಬಹಳ ಬೇಸರದ ಸಂಗತಿ. ಈ ಎಲ್ಲಾ ಸಂಗತಿಗಳಿಗೆ ಇಲಾಖೆಯು ನೀತಿ ನಿಯಮಗಳಲ್ಲಿನ ಸಮನ್ವಯತೆಯ ಕೊರತೆಯಿಂದ ಮತ್ತು ಪರಿಹಾರ ದೊರಕುವಲ್ಲಿ ವಿಳಂಬತೆ ಆಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಎಚ್. ಅಣ್ಣೇಗೌಡ ಬೇಸರ ವ್ಯಕ್ತಪಡಿಸಿದರು.