ಸಾರಾಂಶ
ಗ್ರಾಮದಿಂದ 350 ಮೀಟರ್ ದೂರದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಐದಾರು ಕುಟುಂಬಗಳಿಗೆ ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಕುಡಿಯುವ ನೀರು ಮತ್ತು ವಿದ್ಯುತ್ ಒದಗಿಸಲು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕುಟುಂಬದ ಸದಸ್ಯರೊಂದಿಗೆ ತಾಲೂಕಿನ ಹೊನಗಾನಹಳ್ಳಿ ಗ್ರಾಪಂ ಕಚೇರಿ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.ಗ್ರಾಪಂ ಕಚೇರಿ ಎದುರು ಸೇರಿ ಪ್ರತಿಭಟನಾಕಾರರು, ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕಣಿವೆಕೊಪ್ಪಲು ಗ್ರಾಮದ ಐದಾರು ಕುಟುಂಬಗಳಿಗೆ ಕಳೆದ ಮೂರು ವರ್ಷಗಳಿಂದಲೂ ಕುಡಿಯುವ ನೀರು ಒದಗಿಸಲು ಗ್ರಾಪಂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸತ್ರಸ್ತರ ನೆರವಿಗೆ ಧಾವಿಸಿಲ್ಲ. ರಾಜ್ಯ ಸರ್ಕಾರದ ಪ್ರತಿನಿಧಿಗಳು ಗ್ರಾಮ ಸ್ವರಾಜ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಇಲ್ಲಿನ ಜನಕ್ಕೆ ಕನಿಷ್ಠ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ ಎಂಬ ಆರೋಪಗಳೊಂದಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ ಮಾತನಾಡಿ, ಗ್ರಾಮದಿಂದ 350 ಮೀಟರ್ ದೂರದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಐದಾರು ಕುಟುಂಬಗಳಿಗೆ ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಗ್ರಾಪಂ ಕಚೇರಿ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ, ವಿದ್ಯುತ್ ಇಲಾಖೆ ವಿರುದ್ಧ ಸಬೂಬು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಮತ್ತಷ್ಟು ಜಟಿಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕಣಿವೆಕೊಪ್ಪಲು ಗ್ರಾಮಸ್ಥರು ಎದುರಿಸುತ್ತಿರುವ ನೀರು ಮತ್ತು ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವವರೆಗೂ ನಾವು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್, ತಾಲೂಕು ಅಧ್ಯಕ್ಷ ನೀಲನಹಳ್ಳಿ ಧನಂಜಯ, ಮಾಜಿ ಅಧ್ಯಕ್ಷ ಎಲ್.ಅಶೋಕ್, ಒಬಿಸಿ ಜಿಲ್ಲಾಧ್ಯಕ್ಷ ನರಸಿಂಹ, ಮಂಜಚಾರಿ, ಚಿಕ್ಕಮರಳಿ ನವೀನ್‌ಕುಮಾರ್, ಶಂಭುನಹಳ್ಳಿ ಮಂಜು ಇತರರು ಇದ್ದರು.