ಕ್ವಿಂಟಲ್‌ಗೆ ₹3 ಸಾವಿರದಂತೆ ಮೆಕ್ಕೆಜೋಳ ಖರೀದಿಗೆ ಆಗ್ರಹ

| Published : Oct 29 2025, 01:45 AM IST

ಕ್ವಿಂಟಲ್‌ಗೆ ₹3 ಸಾವಿರದಂತೆ ಮೆಕ್ಕೆಜೋಳ ಖರೀದಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಅಲ್ಪಸ್ವಲ್ಪ ಉಳಿದ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಲು ಹೋದರೆ ಮಾರುಕಟ್ಟೆಯಲ್ಲಿ ಗೋವಿನಜೋಳ ಬೆಲೆ ಪ್ರತಿ 1 ಕ್ವಿಂಟಲ್‌ಗೆ ₹1500ರಿಂದ ₹1700ಕ್ಕೆ ಕುಸಿತವಾಗಿದೆ.

ನರಗುಂದ: ಸರ್ಕಾರವು ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭಿಸಿ ಗೋವಿನಜೋಳವನ್ನು ಕ್ವಿಂಟಲ್‌ಗೆ ₹3 ಸಾವಿರದಂತೆ ಖರೀದಿಸಬೇಕೆಂದು ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.

ಮಂಗಳವಾರ ಪಟ್ಟಣ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಿ ನಂತರ ಮಾತನಾಡಿ, ಪ್ರಸಕ್ತ ವರ್ಷ ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆ ಗೋವಿನಜೋಳ ಬಿತ್ತನೆ ಮಾಡಿದ್ದರು. ಆದರೆ ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ತಾಲೂಕಿನಲ್ಲಿ ವಿಪರೀತ ಮಳೆ ಸುರಿದು ತೇವಾಂಶ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಯಿತು. ನಂತರ ರೈತರು ಅಲ್ಪಸ್ವಲ್ಪ ಉಳಿದ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಲು ಹೋದರೆ ಮಾರುಕಟ್ಟೆಯಲ್ಲಿ ಗೋವಿನಜೋಳ ಬೆಲೆ ಪ್ರತಿ 1 ಕ್ವಿಂಟಲ್‌ಗೆ ₹1500ರಿಂದ ₹1700ಕ್ಕೆ ಕುಸಿತವಾಗಿದೆ ಎಂದರು.

ಈಗಾಗಲೇ ಕೇಂದ್ರ ಸರ್ಕಾರ ರೈತರು ಬೆಳೆದ ಗೋವಿನ ಜೋಳವನ್ನು ಪ್ರತಿ 1 ಕ್ವಿಂಟಲ್‌ಗೆ ₹2400ರಂತೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಆದೇಶ ಮಾಡಿದೆ. ರಾಜ್ಯ ಸರ್ಕಾರ ₹600 ಹೆಚ್ಚುವರಿ ವಂತಿಗೆ ನೀಡಿ ಪ್ರತಿ 1 ಕ್ವಿಂಟಲ್‌ಗೆ ₹3 ಸಾವಿರದಂತೆ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ತೊಂದರೆಯಲ್ಲಿರುವ ರೈತರಿಗೆ ನೆರವಾಗಬೇಕೆಂದರು.

ತಹಸೀಲ್ದಾರ್ ಶ್ರೀಶೈಲ ತಳವಾರ ಅವರು ರೈತರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಸಯ್ಯ ಹೊರಗಿನಮಠ, ಪ್ರೊ. ಪಿ.ಎಸ್. ಅಣ್ಣಿಗೇರಿ, ಅಶೋಕ ಮನವಾಚಾರಿ, ಬಸಪ್ಪ ಮರ್ಚಪ್ಪನವರ, ಬಸನಗೌಡ ಮುಂದಲಮನಿ, ರಾಜು ಹೂಲಿ ಇತರರು ಇದ್ದರು.

ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ

ನರಗುಂದ: ಬೆಂಬಲ ಬೆಲೆಯಡಿ ಖರೀದಿಸಲು ಗೋವಿನಜೋಳದ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಆಗ್ರಹಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲೆಯ ಗದಗ, ನರಗುಂದ, ರೋಣ, ಮುಂಡರಗಿ, ಶಿರಹಟ್ಟಿ, ಗಜೇಂದ್ರಗಡ, ಸೇರಿದಂತೆ ಮುಂತಾದ ಕಡೆ ರೈತರು ಮುಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಯಾದ ಗೋವಿನ ಜೋಳವನ್ನು ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿದೆ.ಸಚಿವ ಎಚ್.ಕೆ. ಪಾಟೀಲ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಮನವಿ ಮಾಡಿದರು. ಸಚಿವ ಎಚ್.ಕೆ. ಪಾಟೀಲ ಅವರು ರೈತರ ಮನವಿ ಸ್ವೀಕರಿಸಿ, ಈ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಉಮೇಶಗೌಡ ಪಾಟೀಲ, ವಿಠ್ಠಲ ಮುಧೋಳೆ, ಶಿವಪುತ್ರಪ್ಪ ನೆಲಗುಡ್ಡದ, ರಾಜಶೇಖರಗೌಡ ಪಾಟೀಲ, ಲಕ್ಷ್ಮಣ ಗಾಜಿ, ರಾಮನಗೌಡ ಪಾಟೀಲ, ಮಾಂತೇಶ ಪಾಟೀಲ, ಶಿವಾನಂದ ಕರಿಯಪ್ಪನವರ, ನರಗುಂದ ತಾಲೂಕ ಅರಶಿಣಗೋಡಿ ಗ್ರಾಮದ ರೈತರು ಇದ್ದರು.