ಗುಣಮಟ್ಟದ ಚಿಕಿತ್ಸೆಯ ಆಸ್ಪತ್ರೆಗಳಿಗೆ ಬೇಡಿಕೆ: ಸಚಿವ ದಿನೇಶ್‌ ಗುಂಡೂರಾವ್‌

| Published : Aug 31 2024, 01:38 AM IST

ಗುಣಮಟ್ಟದ ಚಿಕಿತ್ಸೆಯ ಆಸ್ಪತ್ರೆಗಳಿಗೆ ಬೇಡಿಕೆ: ಸಚಿವ ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಂಪ್‌ವೆಲ್‌ನಲ್ಲಿ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ನೂತನ ಇಂಡಿಯಾನಾ ಕ್ಯಾನ್ಸರ್ ಕೇಂದ್ರ(ಐಸಿಸಿ) ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್‌ಗೆ ಡೇ ಕೇರ್ ಕಿಮೋ ಸೆಂಟರ್ ಆರಂಭಿಸಲಾಗುವುದು. ಮುಂದಿನ ತಿಂಗಳಲ್ಲಿ ಜಾರಿಗೊಳ್ಳಲಿದೆ. ಆಸ್ಪತ್ರೆಗಳು ಖಾಸಗಿ-ಸರ್ಕಾರಿ ಸಹಭಾಗಿತ್ವದೊಂದಿಗೆ ಜತೆಯಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಶುಕ್ರವಾರ ಪಂಪ್‌ವೆಲ್‌ನಲ್ಲಿ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ನೂತನ ಇಂಡಿಯಾನಾ ಕ್ಯಾನ್ಸರ್ ಕೇಂದ್ರ(ಐಸಿಸಿ) ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಒಳ್ಳೆಯ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಬೇಡಿಕೆ ಇದೆ. ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಇದಕ್ಕೆಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಈಗ ಕರ್ನಾಟಕ ಮತ್ತು ಉತ್ತರ ಕೇರಳಾದ್ಯಂತ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಒದಗಿಸಲು ಇಂಡಿಯಾನಾ ಕ್ಯಾನ್ಸರ್ ಕೇಂದ್ರ(ಐಸಿಸಿ) ಆರಂಭಿಸಿರುವುದು ಈ ಸಂಸ್ಥೆಯ ಯಶಸ್ಸಿಗೆ ಕಾರಣ ಎಂದು ಸಚಿವರು ಶ್ಲಾಘಿಸಿದರು.

ಕರ್ನಾಟಕ ಅಲೈಡ್‌ ಮತ್ತು ಹೆಲ್ತ್‌ಕೇರ್‌ ಕೌನ್ಸಿಲ್‌ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್‌ ಫರೀದ್‌ ಮಾತನಾಡಿ, ಪ್ರಸಕ್ತ ಭಾರತ ಕ್ಯಾನ್ಸರ್ ಸಮಸ್ಯೆ ಎದುರಿಸುತ್ತಿದೆ. ಈ ಸಂಸ್ಥೆ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.

ಸುಧಾರಿತ ಕ್ಯಾನ್ಸರ್‌ ಚಿಕಿತ್ಸಾ ಸೌಲಭ್ಯ: ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಕ್ಯಾನ್ಸರ್ ಚಿಕಿತ್ಸೆಯು ಗಮನಾರ್ಹ ಪ್ರಗತಿ ಕಂಡಿದೆ. ಇಂಡಿಯಾನಾ ಕ್ಯಾನ್ಸರ್ ಕೇಂದ್ರ ಮಂಗಳೂರಿನಲ್ಲಿ ಸುಧಾರಿತ ಕ್ಯಾನ್ಸರ್ ಚಿಕಿತ್ಸೆಯ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಇಂಡಿಯಾನಾ ಕ್ಯಾನ್ಸರ್ ಕೇಂದ್ರದಲ್ಲಿ ಪ್ರತಿಷ್ಠಿತ ಕ್ಯಾನ್ಸರ್ ತಜ್ಞರ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.

ಪಾಲಿಕೆ ಪ್ರತಿಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಆಸ್ಪತ್ರೆ ವೈದ್ಯರಾದ ಡಾ. ಆದಿತ್ಯ ವಿದ್ವರಾಜ್, ಡಾ. ಸಂಗೀತಾ ಕೆ., ಡಾ. ಅಪೂರ್ವ, ಕ್ಯಾನ್ಸರ್ ಚಿಕಿತ್ಸಾ ತಜ್ಞರಾದ ಡಾ.ಅಜಯ್ ಕುಮಾರ್ ಮತ್ತಿತರರಿದ್ದರು.

ಆಸ್ಪತ್ರೆ ಅಧ್ಯಕ್ಷ ಡಾ. ಆಲಿ ಕುಂಬ್ಳೆ ಸ್ವಾಗತಿಸಿದರು. ಮೆಡಿಕಲ್ ಆಂಕಾಲಜಿ ವಿಭಾಗದ ಡಾ. ರಮಾನಾಥ ಶೆಣೈ ವಂದಿಸಿದರು.