ಸಾರಾಂಶ
ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಎಸ್.ಎಮ್.ಎನ್. ಸೌಹಾರ್ದದ ವಂಚಿತ ಠೇವಣಿದಾರರ ಹೋರಾಟ ಸಮಿತಿ ಹಾಗೂ ಗ್ರಾಹಕರು ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಎಸ್‌ಎಂಎನ್ ಸೌಹಾರ್ದದಲ್ಲಿ ಕೋಟ್ಯಂತರ ರುಪಾಯಿ ಹಣ ತೊಡಗಿಸಿ ಕೈ ಸುಟ್ಟುಕೊಂಡ ಠೇವಣಿದಾರರಿಗೆ ಶೀಘ್ರದಲ್ಲಿ ಕ್ಲೇಮ್ ಪಡೆದುಕೊಂಡು ಹಣ ಮರುಪಾವತಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಎಸ್.ಎಮ್.ಎನ್. ಸೌಹಾರ್ದದ ವಂಚಿತ ಠೇವಣಿದಾರರ ಹೋರಾಟ ಸಮಿತಿ ಹಾಗೂ ಗ್ರಾಹಕರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಎಸ್‌ಎಂಎನ್ ಸೌಹಾರ್ದದಲ್ಲಿ ತೊಡಗಿಸಿದ ಹಣವನ್ನು ಆಡಳಿತ ಮಂಡಳಿ ₹30 ಕೋಟಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಹೋರಾಟದ ಪ್ರತಿಫಲವಾಗಿ ಸರ್ಕಾರ ಎಚ್ಚೆತ್ತುಕೊಂಡು ಸಿಐಡಿ ತನಿಖೆ ನಡೆಸಿ ಸಕ್ಷಮ ಪ್ರಾಧಿಕಾರ ನೇಮಕ ಮಾಡಿ ಸಂಬಂಧಿಸಿದ ಸೌಹಾರ್ದದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಇನ್ನುಳಿದ ಸಿಬ್ಬಂದಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಈ ಆಸ್ತಿಯನ್ನು ಶೀಘ್ರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಹಾರಾಜು ಮಾಡಿ ನೊಂದ ಠೇವಣಿದಾರರಿಗೆ ಬಡ್ಡಿ ಸಮೇತ ಹಣ ಮರುಪಾವತಿಸಬೇಕು. ಈಗಾಗಲೇ ಎಸ್‌ಎಂಎನ್ ಸೌಹಾರ್ದದ ವಿಶೇಷ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ ಅವರು ವಂಚಿತ ಠೇವಣಿದಾರರಿಂದ ಕ್ಲೇಮ್ ಪಡೆದುಕೊಳ್ಳಲು ಜಿಲ್ಲಾಡಳಿತಕ್ಕೆ ಆದೇಶ ಮಾಡಿರುವುದು ಸಮಾಧಾನಕರ ವಿಷಯವಾಗಿದೆ. ಶೀಘ್ರದಲ್ಲಿ ಠೇವಣಿದಾರರ ಬಾಂಡ್‌ಗಳನ್ನು ಪಡೆದುಕೊಂಡು ಹಣ ಹಿಂದಿರುಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎನ್.ಕೆ.ಮನಗೊಂಡ, ಎಸ್.ಜಿ.ಸಂಗೋದಿಮಠ, ಬಸವರಾಜ ಅವಟಿ, ಬಸವರಾಜ ಚಿಕ್ಕೊಂಡ, ಈಶ್ವರ ಸಾರವಾಡ, ಬಸವರಾಜ ಬಾಡಗಿ, ಕೆ.ಡಿ.ನರಗುಂದ ಸೇರಿದಂತೆ ನೂರಾರು ಠೇವಣಿದಾರರು ಇದ್ದರು.