ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿಬೆಳೆ ಪರಿಹಾರದಲ್ಲಿ ಆಗಿರುವ ತಾರತಮ್ಯ ಸರಿಪಡಿಸಿ ಎಲ್ಲ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ರೈತರು ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಕೃಷಿ ಇಲಾಖೆ ಅಧಿಕಾರಿ ನಿಂಗನಗೌಡ ಬಿರಾದಾರ ಪಾಟೀಲ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಮಹದೇವ ಮಡಿವಾಳ ಮಾತನಾಡಿ, ರಾಜ್ಯ ಸರ್ಕಾರ ಅಥಣಿ ಮತ್ತು ಕಾಗವಾಡ ಸೇರಿದಂತೆ ಅನೇಕ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಈಗ ಬೆಳೆ ಹಾನಿ ಪರಿಹಾರವನ್ನು ಕೆಲವೇ ಕೆಲವು ರೈತರಿಗೆ ನೀಡಿ ಇನ್ನುಳಿದ ರೈತರಿಗೆ ಅನ್ಯಾಯ ಮಾಡುತ್ತಿದೆ. ಬೆಳೆಹಾನಿ ಪರಿಹಾರದಲ್ಲಿ ಆಗುತ್ತಿರುವ ಅನ್ಯಾಯ ಮತ್ತು ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಅಲ್ಪಸ್ವಲ್ಪ ಆಗಿರುವ ಮಳೆಯನ್ನು ನಂಬಿ ಅನೇಕ ರೈತರು ರೈತರು ಬಿತ್ತನೆ ಕಾರ್ಯ ಮಾಡಿದ್ದರು. ಆದರೆ, ಒಣ ಬೇಸಾಯದ ಪ್ರದೇಶದಲ್ಲಿ ಮಳೆ ಇಲ್ಲದೇ ತೇವಾಂಶದ ಕೊರತೆಯಿಂದ ಬೆಳೆಗಳು ಮೊಳಕೆಯ ಸ್ಥಿತಿಯಲ್ಲಿಯೇ ಕಮರಿ ಹೋದವು. ಕೃಷ್ಣಾ ನದಿ ತೀರದ ಅನೇಕ ಗ್ರಾಮಗಳಲ್ಲಿ ಸಕಾಲಕ್ಕೆ ವಿದ್ಯುತ್ ಪೂರೈಸದ ಕಾರಣ ಅನೇಕ ಕಬ್ಬಿನ ಬೆಳೆಗಳಿಗೆ ನೀರು ಒದಗಿಸಲಾಗದೇ ಕಬ್ಬಿನ ಬೆಳೆಗಳು ಕೂಡ ಒಣಗಿವೆ. ಈ ಬಗ್ಗೆ ಸರಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ದೃಢೀಕರಣ ಮಾಡಬೇಕಾದ ಅಧಿಕಾರಿಗಳು 3 ತಿಂಗಳ ನಂತರ ಸಮೀಕ್ಷೆ ನಡೆಸಿ ರೈತರ ಜಮೀನುಗಳಲ್ಲಿ ಬೆಳೆ ಇಲ್ಲ ಎಂಬ ತಪ್ಪು ವರದಿ ನೀಡಿದ್ದೇ ಈಗ ಪರಿಹಾರ ನೀಡುವಲ್ಲಿ ತಾರತಮ್ಯ ಆಗುತ್ತಿದೆ. ಕೃಷಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಕೂಡಲೇ ಇದನ್ನು ಸರಿಪಡಿಸಿ ಒಣ ಬೇಸಾಯ ಮತ್ತು ನೀರಾವರಿ ಪ್ರದೇಶದ ಎಲ್ಲ ರೈತರಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಲ್ಲ ರಾಜ್ಯಗಳಿಗೂ ಪರಿಹಾರಧನ ನೀಡಿದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯದ ರೈತರನ್ನು ಕಡೆಗಣಿಸಿದ್ದರು. ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ ಕೇಂದ್ರ ಸರ್ಕಾರ ಪರಿಹಾರ ನೀಡಿತು. ಇದೀಗ ರಾಜ್ಯ ಸರ್ಕಾರವು ಈ ಪರಿಹಾರ ಧನವನ್ನು ಎಲ್ಲ ರೈತರಿಗೆ ಸಮನಾಗಿ ಹಂಚದೇ ಅನ್ಯಾಯ ಮಾಡುತ್ತಿದೆ. ಅಥಣಿ ಮತ್ತು ಕಾಗವಾಡ ತಾಲೂಕುಗಳಲ್ಲಿ ಕೇವಲ ಶೇ.20ರಷ್ಟು ರೈತರಿಗೆ ಮಾತ್ರ ಪರಿಹಾರಧನ ಬಂದಿರುತ್ತದೆ. ಇನ್ನುಳಿದ ಶೇ.80 80ರಷ್ಟು ರೈತರಿಗೆ ಅನ್ಯಾಯವಾಗಿದ್ದು, ಸರ್ಕಾರ ಅದನ್ನು ಬೇಗನೆ ಸರಿಪಡಿಸಬೇಕು ಎಂದು ಮನವಿ ಮಾಡಿದರು.ರಾಜ್ಯ ಸರ್ಕಾರ ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಈಗಾಗಲೇ ನಾವು ಅನೇಕ ಬಾರಿ ಮನವಿ ನೀಡಿದ್ದೇವೆ. ಆದರೆ, ಸರ್ಕಾರ ಈ ಬಗ್ಗೆ ಆಸಕ್ತಿವಹಿಸಿ ನೀರು ತರಿಸುವ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿಯಿಂದ ಜನಜಾನುವಾರುಗಳಿಗೆ ನೀರಿಲ್ಲ, ತೋಟದ ವಸತಿಗಳಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಕಾಲಕ್ಕೆ ನೀರು ಒದಗಿಸುತ್ತಿಲ್ಲ, ಬೆಳೆ ಹಾನಿ ಪರಿಹಾರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಪಾರಿಸ ಯಳಗೊಂಡ, ಕುಮಾರ ಮಹಿಷವಾಡಗಿ, ರಮೇಶ್ ಕುಂಬಾರ, ಪಿಂಟು ಕಬಾಡಗಿ, ಚನ್ನಪ್ಪ ಚನ್ನಗೌಡರ, ಭರಮು ಕೌಜಲಗಿ, ನಿಂಗಪ್ಪ ಉದ್ದಾನಗೋಳ, ಸುರೇಶ ಮೇತ್ರಿ, ಅಲ್ಲಪ್ಪ ಹವಾಲ್ದಾರ, ಸಂಗಪ್ಪ ಕರಿಗಾರ, ಬಸಪ್ಪ ತಳವಾರ, ದುಂಡಪ್ಪ ತನಂಗಿ, ಮಹದೇವ ಕುಚನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.---------------ರೈತರಲ್ಲಿ ಒಗ್ಗಟ್ಟಿಲ್ಲದ ಕಾರಣ ಸರ್ಕಾರಗಳು ನಮ್ಮ ಜೊತೆ ಚೆಲ್ಲಾಟ ನಡೆಸುತ್ತಿವೆ. ಆದ್ದರಿಂದ ನಮ್ಮ ರೈತರು ಜಾಗೃತರಾಗಬೇಕು. ರೈತ ಕುಲಕ್ಕೆ ಅನ್ಯಾಯವಾದಾಗ ಪ್ರತಿಭಟಿಸಲು ಸಿದ್ಧರಾಗಬೇಕು.
-ಮಹಾದೇವ ಮಡಿವಾಳ, ಅಧ್ಯಕ್ಷರು ರೈತ ಸಂಘ ಅಥಣಿ.14ಅಥಣಿ 03ಅಥಣಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ನೇತೃತ್ವದಲ್ಲಿ ತಾಲೂಕಿನ ರೈತರಿಗೆ ಬೆಳೆಹಾನಿ ಪರಿಹಾರದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಿ ಎಲ್ಲ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಕೃಷಿ ಇಲಾಖೆ ಅಧಿಕಾರಿ ನಿಂಗನಗೌಡ ಬಿರಾದಾರ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
--------------------------------ನೀರಿನ ಸಮಸ್ಯೆಗೆ ಸಹಾಯವಾಣಿ, ಪರಿಹಾರಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಕ
ಅಥಣಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕರ್‌ಗಳನ್ನು ಆರಂಭಿಸಲಾಗಿದ್ದು, ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಸಂಪರ್ಕಿಸಬೇಕು ತಾಲೂಕು ತಹಸೀಲ್ದಾರ್ ವಾಣಿ.ಯು ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಹಂಗಾಮಿನ ಮಳೆ ಕೊರತೆಯಿಂದ ಬರಗಾಲ ಪರಿಹಾರಕ್ಕೆ ಸಂಬಂಧಿಸಿದಂತೆ ದೂರು ಸ್ವೀಕೃತಿ ಕೇಂದ್ರಕ್ಕೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಬರಗಾಲ ಪರಿಹಾರಕ್ಕೆ ಸಂಬಂಧಿಸಿದಂತೆ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಬ್ಯಾಂಕ್‌ಗಳ ಸಮಸ್ಯೆ ಕುರಿತು ದೂರು ನಿರ್ವಹಣಾ ಕೋಶ (ಸಹಾಯ ಕೇಂದ್ರ) ತೆರೆಯಲಾಗಿರುತ್ತದೆ. ಸಾರ್ವಜನಿಕರ ದೂರು ಮತ್ತು ಆಕ್ಷೇಪಣೆ ಸ್ವೀಕರಿಸಲು ಸಹಾಯವಾಣಿ ಕೇಂದ್ರ ದೂ.08289-469501, ಮೊ.7349312928 ಸಂಪರ್ಕಿಸಬಹುದು ಎಂದು ತಿಳಿಸಿದರು.