ರಾಣಿಬೆನ್ನೂರು: ತಾಲೂಕಿನ ಹುಲಿಹಳ್ಳಿ ಮೆಗಾ ಮಾರುಕಟ್ಟೆಯಲ್ಲಿ ಹಂಚಿಕೆಯಾದ ನಿವೇಶನಗಳ ನೋಂದಣಿ ಮಾಡಿಕೊಡಬೇಕು ಹಾಗೂ ಜಾನುವಾರು ಮಾರುಕಟ್ಟೆ ಉಪ ಪ್ರಾಂಗಣದಲ್ಲಿ ಹಂಚಿಕೆಯಾದ ನಿವೇಶನಗಳ ಹಣ ವಾಪಸು ನೀಡುವಂತೆ ಆಗ್ರಹಿಸಿ ನಗರದ ನೆಹರು ಮಾರ್ಕೆಟ್ ವರ್ತಕರ ಸಂಘದ ವರ್ತಕರು ಮಂಗಳವಾರ ಸ್ಥಳೀಯ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಮೂಲಕ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ವರ್ತಕರು, ಎಪಿಎಂಸಿಯಿಂದ ಲೈಸೆನ್ಸ್ ಪಡೆದು ನೆಹರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ಕೆಲವು ವರ್ತಕರಿಗೆ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಿ ಎರಡು ವರ್ಷಗಳು ಗತಿಸಿವೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಕಚೇರಿಗೆ ಸಾಕಷ್ಟು ಹಣವನ್ನು ಕಾಲಕಾಲಕ್ಕೆ ತುಂಬಲಾಗಿದೆ. ಆದರೆ ಇಂದಿನವರೆಗೂ ಎಪಿಎಂಸಿ ಕಾರ್ಯಾಲಯದಿಂದ ಯಾವುದೇ ತರಹದ ನೋಂದಣಿ ಕಾರ್ಯದ ಬಗ್ಗೆ ಮಾಹಿತಿ ಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇ-ಸ್ವತ್ತು ಕಾರ್ಯವೂ ಆಗಿಲ್ಲ. ಆದ್ದರಿಂದ ನಿವೇಶನಗಳ ನೋಂದಣಿ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮಾಡಿಕೊಡಬೇಕು. ಇದಲ್ಲದೆ ಬಾಕಿ ಉಳಿದ ವರ್ತಕರಿಗೂ ಮೆಗಾ ಮಾರುಕಟ್ಟೆಯಲ್ಲಿ ನಿವೇಶನಗಳನ್ನು ಮಂಜೂರು ಮಾಡಬೇಕು. ಇನ್ನು ಎಪಿಎಂಸಿಗೆ ಸೇರಿದ ಜಾನುವಾರು ಮಾರುಕಟ್ಟೆ ಉಪ ಪ್ರಾಂಗಣದಲ್ಲಿ ತಾತ್ಕಾಲಿಕ ಶೆಡ್ ಸಹಿತ ಖುಲ್ಲಾ ಜಾಗೆಯನ್ನು ಲಿವ್ ಆಂಡ್ ಲೈಸೆನ್ಸ್ ಶುಲ್ಕದ ಆಧಾರದ ಮೇಲೆ ಹಂಚಿಕೆ ಮಾಡಿ ಎಲ್ಲಾ ವರ್ತಕರಿಂದ ಬಾಡಿಗೆ ಮತ್ತು ಬಡ್ಡಿಯನ್ನು ಸಹ ತುಂಬಿಸಿಕೊಳ್ಳಲಾಗಿದೆ. ಆದರೆ ಇದುವರೆಗೂ ಅವುಗಳನ್ನು ವರ್ತಕರ ತಾಬಾಕ್ಕೆ ನೀಡಿರುವುದಿಲ್ಲ. ಈ ವಿಷಯ ಕುರಿತಂತೆ ನೆಹರು ಮಾರ್ಕೆಟ್ ವರ್ತಕರು ತಮ್ಮ (ಎಪಿಎಂಸಿ ಕಾರ್ಯದರ್ಶಿಗಳು) ಜತೆ ಹಲವು ಬಾರಿ ಮೌಖಿಕವಾಗಿ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಾಗಿ ಈ ರೀತಿ ಹಂಚಿಕೆ ಮಾಡಿದ ನಿವೇಶನಗಳ ಅವಧಿ 2016ಕ್ಕೆ ಮುಕ್ತಾಯವಾಗಿದೆ. ಈ ನಿಟ್ಟಿನಲ್ಲಿ ನೆಹರು ಮಾರ್ಕೆಟ್‌ನ 123 ವರ್ತಕರು ಮುಂದಿನ ಅವಧಿಯ ಹಣ ಭರಿಸಲು ಹಾಗೂ ಅಲ್ಲಿಗೆ ಹೋಗಿ ವ್ಯಾಪಾರ ಮಾಡಲು ತಯಾರಿದ್ದರೂ ತಾವು ಅದಕ್ಕೆ ಅವಕಾಶ ನೀಡಲಿಲ್ಲ. ಪರಿಸ್ಥಿತಿ ಹೀಗಿದ್ದರೂ ತಾವು ನೆಹರು ಮಾರ್ಕೆಟ್ ವರ್ತಕರಿಗೆ ಅಂತಿಮ ನೋಟಿಸು ನೀಡಿ ಸ್ಥಳಾಂತರಿಸಲು ಸೂಚಿಸಿರುವುದು ಸಮಂಜಸವಲ್ಲ. ಈ ವಿಷಯ ಕುರಿತು ಏನಾದರೂ ಸಮಸ್ಯೆಯಿದ್ದಲ್ಲಿ ಸಭೆ ಕರೆದು ಬಗೆಹರಿಸಬಹುದಿತ್ತು. ಆದರೆ ಇದೀಗ ಆ ಜಾಗೆಯನ್ನು ಬೇರೆ ಇಲಾಖೆಯವರಿಗೆ ಹಸ್ತಾಂತರ ಮಾಡುವ ತಜವಿಜಿಯಲ್ಲಿ ಇರುತ್ತೀರಿ ಅಂತಾ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕಾರಣ ತಾವುಗಳು ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ನಮ್ಮ ವರ್ತಕರು ಅಧಿಕೃತವಾಗಿ ನೀಡಿರುವ ಹಣವನ್ನು ಕೂಡಲೇ ಇಲಾಖೆಯಿಂದ ಬಡ್ಡಿ ಸಮೇತ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು. ಬಸವರಾಜ ಪಟ್ಟಣಶೆಟ್ಟಿ, ಗದಿಗೆಪ್ಪ ಹೊಟ್ಟಿಗೌಡ್ರ, ಅಶೋಕ ಗಂಗನಗೌಡ್ರ, ಹಾಲಪ್ಪ ಮುದ್ದಿಯವರ, ನಾಗರಾಜ ಬಣಕಾರ, ಬಸವರಾಜ ನರಸಗೊಂಡರ, ವಿ.ಎಸ್. ಗುಡ್ಡದ, ರಾಜು ನರಸಗೊಂಡರ, ನವೀನ ದೊಡ್ಡಗೌಡ್ರ, ಪುಟ್ಟನಗೌಡ್ರ ತೆಂಬದ, ಮೃತ್ಯುಂಜಯ ಪಾಟೀಲ, ಶಿವಯೋಗಿ ಅಸುಂಡಿ, ಮಲ್ಲಿಕಾರ್ಜುನ ತೆಂಬದ, ಫಕ್ಕೀರಪ್ಪ ಹೊನ್ನಳ್ಳಿ, ಸೋಮನಗೌಡ ಹೊಟ್ಟಿಗೌಡ್ರ, ಅವಿನಾಶ ಸೊರಟೂರ, ಹನುಮಂತಪ್ಪ ಸಾವುಕಾರ, ವೆಂಕಟೇಶ ಸಾವುಕಾರ ಮತ್ತಿತರರಿದ್ದರು.